ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಯಲ್ಲಿ, ರೈತರಿಗೆ ನೀರು ಕೊಡುವುದರಲ್ಲಿ ನಮ್ಮ ಯೋಗೇಶ್ವರ್ ಆಧುನಿಕ ಭಗೀರಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಣಗಾನ ಮಾಡಿದ್ದಾರೆ. ಯೋಗೇಶ್ವರ್ ಅವರು ಚನ್ನಪಟ್ಟಣ ಮಣ್ಣಿನ ಮೇಲೆ, ಇಲ್ಲಿನ ರೈತ ಸಮುದಾಯ, ಇಲ್ಲಿನ ಪಶುಪಾಲಕರು, ಗೋ ಸಾಕಾಣಿಕೆದಾರರ ಮೇಲೆ ಅಪಾರ ಪ್ರೀತಿ, ಗೌರವ ಹಾಗೂ ಕಾಳಜಿ ಇಟ್ಟುಕೊಂಡಿದ್ದಾರೆ. ಹೀಗಾಗಿ ರೈತ ಕುಲದ ಉದ್ಧಾರಕ್ಕಾಗಿ ಕೆರೆಗಳನ್ನು ತುಂಬಿಸಿ ಪುಣ್ಯಾತ್ಮ ಎನ್ನಿಸಿಕೊಂಡರು ಎಂದು ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಬಾವ, ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ್ ಅವರು ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಂದಾಗ ಕೈ ಕೊಟ್ಟರು. ಈಗ ಯೋಗೇಶ್ವರ್ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಚನ್ನಪಟ್ಟಣದ ಜನ ಮಾಡಬೇಕು ಎಂದು ಜನತೆಗೆ ಮನವಿ ಮಾಡಿದರು.
ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಓಕೆ. ಆದರೆ, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪುಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.
ಬುದ್ದಿವಂತ ಒಕ್ಕಲಿಗರನ್ನು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರನ್ನು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿಕೆ ಶಿವಕುಮಾರ್ ಹಾಗೂ ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ, ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಿದ್ರಾ ? ಎನ್ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳ್ತಿದ್ರಾ? ಇರಲಿ, ಚನ್ನಪಟ್ಟಣಕ್ಕೆ ಏನು ಮಾಡಿದ್ದೀರಿ ಎನ್ನುವುದನ್ನು ಕ್ಷೇತ್ರದ ಜನತೆ ಕೇಳಬೇಕು. ಬರೀ ಕಣ್ಣೀರು ಹಾಕೋದಲ್ಲ. ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣುಮಕ್ಕಳ ಪರವಾಗಿ ಪಾಪ ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ ಎಂದು ವ್ಯಂಗ್ಯವಾಡಿದರು.
ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದೆ ಎಂದು ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರ್ಕಾರ ಕಿತ್ತಾಕುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ ಸರ್ಕಾರವನ್ನು ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ದೇವೇಗೌಡರ ಹೊಟ್ಟೆಯುರಿ ಅವರನ್ನೇ ಸುಡತ್ತೆ ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಅಂದು ವಾಗ್ದಾಳಿ ನಡೆಸಿದರು.