ರಾಜಧಾನಿ ಎಕ್ಸ್‌ಪ್ರೆಸ್‌ ಡಿಕ್ಕಿ: ಏಳು ಆನೆಗಳ ಸಾವು

ನವದೆಹಲಿ/ಗುವಾಹಟಿ: ಶನಿವಾರ ಬೆಳಗಿನ ಜಾವ ಅಸ್ಸಾಂನ ಹೊಜೈ ಸಮೀಪ ಸೈರಾಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಆನೆಗಳು ಸಾವನ್ನಪ್ಪಿದ್ದು, ಒಂದು ಮರಿ ಗಾಯಗೊಂಡಿದೆ. ಅಪಘಾತದಿಂದ ರೈಲಿನ ಕೆಲವು ಬೋಗಿಗಳು ಹಳಿತಪ್ಪಿದ್ದು, ಈಶಾನ್ಯ ಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ನವದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ಬೆಳಿಗ್ಗೆ 2.17ರ ಸುಮಾರಿಗೆ ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಏಳು ಆನೆಗಳ ಸಾವನ್ನು ದೃಢಪಡಿಸಿದ್ದು, ಗಾಯಗೊಂಡ ಮರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.

ಡಿಕ್ಕಿಯ ಪರಿಣಾಮ ರೈಲಿನ ಕೆಲ ಬೋಗಿಗಳು ಹಳಿ ತಪ್ಪಿದ್ದರೂ, ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಮಿಜೋರಾಂನ ಐಜ್ವಾಲ್ ಸಮೀಪದ ಸೈರಾಂಗ್‌ನಿಂದ ದೆಹಲಿಯ ಆನಂದ್ ವಿಹಾರ್‌ ಟರ್ಮಿನಲ್‌ಗೆ ಸಂಚರಿಸುವ ಈ ರೈಲು ಗುವಾಹಟಿಯಿಂದ ಸುಮಾರು 126 ಕಿಮೀ ದೂರದ ಹೊಜೈ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.

ಅಪಘಾತದ ಬಳಿಕ ರೈಲ್ವೆ ಅಧಿಕಾರಿಗಳು ಮತ್ತು ಪರಿಹಾರ ತಂಡಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಪುನರ್‌ಸ್ಥಾಪನಾ ಕಾರ್ಯ ಆರಂಭಿಸಲಾಗಿದೆ. ಹಳಿಗಳ ಮೇಲೆ ಆನೆಗಳ ಶವಗಳು ಇದ್ದುದರಿಂದ ಮೇಲಿನ ಅಸ್ಸಾಂ ಹಾಗೂ ಈಶಾನ್ಯ ಭಾಗಗಳಿಗೆ ತೆರಳುವ ಹಲವು ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ.

ಹಳಿತಪ್ಪಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ಅದೇ ರೈಲಿನ ಇತರ ಬೋಗಿಗಳ ಖಾಲಿ ಬರ್ತ್‌ಗಳಿಗೆ ಸ್ಥಳಾಂತರಿಸಲಾಗಿದೆ. ಗುವಾಹಟಿಯಲ್ಲಿ ರೈಲು ತಲುಪಿದ ಬಳಿಕ ಹೆಚ್ಚುವರಿ ಬೋಗಿಗಳನ್ನು ಜೋಡಿಸಿ ಮುಂದಿನ ಪ್ರಯಾಣ ಮುಂದುವರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಪ್ರದೇಶ ಗುರುತಿಸಲಾದ ಆನೆ ಕಾರಿಡಾರ್ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಳಿಗಳ ಮೇಲೆ ಆನೆಗಳ ಹಿಂಡನ್ನು ಕಂಡ ತಕ್ಷಣ ಲೋಕೋ ಪೈಲಟ್‌ ತುರ್ತು ಬ್ರೇಕ್‌ ಹಾಕಿದರೂ ಡಿಕ್ಕಿ ತಪ್ಪಿಸಲಾಗಲಿಲ್ಲ ಎಂದು ತಿಳಿದುಬಂದಿದೆ.

Related posts