ಬೆಂಗಳೂರು: “ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರವನ್ನು ಪ್ರತಿ ಪಂಚಾಯಿತಿಯಲ್ಲಿ ಸ್ಥಾಪನೆ ಮಾಡಿಸಿದ್ದೆ. ಬೇರೆ ಸರ್ಕಾರಗಳು ರಾಜೀವ್ ಗಾಂಧಿ ಅವರ ಹೆಸರು ಇದೆ ಎಂದು ಈ ಯೋಜನೆ ಮುಂದುವರೆಸಲಿಲ್ಲ. ಈಗ ಈ ಕೇಂದ್ರಗಳನ್ನು ಪುನಾರಂಭಿಸಿ ಯುವಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿ ಮತ್ತು ದೇವರರಾಜ ಅರಸು ಜಯಂತ್ಯೋತ್ಸವದಲ್ಲಿ ಮಾತನಾಡಿದ ಶಿವಕುಮಾರ್, “ರಾಜೀವ್ ಗಾಂಧಿ ಎನ್ನುವುದು ಕೇವಲ ಹೆಸರಲ್ಲ. ದೇಶದ ಯುವ ಆಲೋಚನೆಯ ಶಕ್ತಿ. ಜೊತೆಗೆ ಈ ಕರ್ನಾಟಕದ ಶಕ್ತಿಯಾಗಿದ್ದ ದೇವರಾಜ್ ಅರಸು ಅವರು ಹುಟ್ಟಿದ ದಿನ ಇಂದು. ಎರಡು ಮಹಾನ್ ಶಕ್ತಿಗಳ ಆಡಳಿತ ನಮಗೆಲ್ಲ ಮಾದರಿ ಎಂದರು.
ಪಂಚಾಯಿತಿಯಿಂದ ಪಾರ್ಲಿಮೆಂಟಿನ ತನಕ ನಾಯಕರು ಬೇಕು ಎಂಬ ಆಲೋಚನೆ ಅವರದು. ನಾಯಕರುಗಳನ್ನು ಗುರುತಿಸಲು ಅನುವಾಗುವಂತೆ ಸಂವಿಧಾನದ 73 ಮತ್ತು 74 ನೇ ಪರಿಚ್ಚೆಧಕ್ಕೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಯುವ ನಾಯಕತ್ವದ ಬಗ್ಗೆ ಅವರಿಗೆ ಇದ್ದ ದೂರದೃಷ್ಟಿಯ ಫಲದಿಂದ ನಾವೆಲ್ಲಾ ರಾಜಕಾರಣದಲ್ಲಿ ಬೆಳೆಯುವಂತಾಯಿತು ಎಂದವರು ಹೇಳಿದರು.
ನೆಹರು ಅವರು ಅಲಹಾಬಾದ್ ಮುನ್ಸಿಪಲ್ ಕಾರ್ಪೋರೇಷನ್ನ ಅಧ್ಯಕ್ಷರಾಗಿದ್ದರು, ರಾಜ್ಗೋಪಾಲ್ಚಾರಿ ಮಧುರೈ ಮುನಿಸಿಪಲ್ ಅಧ್ಯಕ್ಷರಾಗಿದ್ದರು, ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿ ಅವರು ಪಂಚಾಯಿತಿ ಅಧ್ಯಕ್ಷರಾಗಿದ್ದರು, ವಿಲಾಸ್ರಾವ್ ದೇಶ್ಮುಖ್ ಜಿಲ್ಲಾಪಂಚಾಯಿತಿ ಸದಸ್ಯ, ಸರ್ಪಂಚ್ ನಂತರ ಮಹಾರಾಷ್ಟ್ರದ ಸಿಎಂ ಆಗಿ 7 ವರ್ಷ ಸೇವೆ ಸಲ್ಲಿಸಿದ್ದರು. ಇವರೆಲ್ಲಾ ಬೆಳೆದಿದ್ದು ಸ್ಥಳೀಯ ಸಂಸ್ಥೆಗಳಿಂದ ಎಂದ ಡಿಕೆಶಿ, ಹಿಂದಿನ ಸರ್ಕಾರಕ್ಕೆ ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಲ್ಲದ ಕಾರಣಕ್ಕೆ ಚುನಾವಣೆಗಳನ್ನೇ ನಡೆಸಿರಲಿಲ್ಲ, ನಾವೀಗ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆದಷ್ಟು ಬೇಗ ನಡೆಸುತ್ತೇವೆ. ಬಿಬಿಎಂಪಿ ಚುನಾವಣೆ ನಮ್ಮ ಮೊದಲ ಆದ್ಯತೆ ಎಂದರು.
ರಾಹುಲ್ ಗಾಂಧಿ ಅವರು ಪಕ್ಷಕ್ಕೆ ಬಲ ನೀಡುವಂತಹ ನಾಯಕರಿಗೆ ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಗಳನ್ನು ಕೊಡಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಶೀಘ್ರದಲ್ಲೇ ಎಲ್ಲರ ಜೊತೆ ಚರ್ಚೆ ಮಾಡಿ, ನಿಯಮಾವಳಿ ರೂಪಿಸಿ ಪಕ್ಷದ ಎಲ್ಲಾ ಘಟಕಗಳ ಸದಸ್ಯರಿಗೆ ಸಮಾನವಾದ ಅವಕಾಶ ನೀಡಲಾಗುವುದು ಎಂದವರು ತಿಳಿಸಿದರು.
ಈ ಬಾರಿಯ ಚುನಾವಣಾ ಫಲಿತಾಂಶದ ಹಿಂದಿನ ದಿನವೂ ಒಂದಷ್ಟು ಜನ ಸಲಹೆ ಕೊಡುತ್ತಾ ಇದ್ದರು, ಅವರನ್ನ, ಇವರನ್ನ, ದಳದವರ ಸಹಾಯ ಕೇಳಿ ಎಂದು. ಅದಕ್ಕೆ “ನಾನು ಹೇಳಿದೆ. ಹೊಲವನ್ನು ಉತ್ತಿ, ಬಿತ್ತಿ, ಗೊಬ್ಬರ ಹಾಕಿದವರಿಗೆ ಗೊತ್ತು ಏನು ಫಲ ಬರುತ್ತದೆ” ಎಂದು.
ಎರಡು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ ಬೆಳಗಾವಿಯಲ್ಲೇ ನಡೆದಿದ್ದಾವೆ. ಆದ ಕಾರಣ ಗೃಹಲಕ್ಷ್ಮೀ ಯೋಜನೆಯನ್ನು ಬೇರೆ ಕಡೆ ನಡೆಸಿ ಎಂದು ಸಲಹೆ ನೀಡಿದರು. ಅದರಂತೆ ಆ.30ರಂದು ಮೈಸೂರಿನಲ್ಲಿ ಭಾಗ್ಯದ ಲಕ್ಷ್ಮಿ ಮನೆಗೆ ಬರುವುದು ಎಂದು ಡಿಕೆಶಿ ತಿಳಿಸಿದರು.