ದೆಹಲಿ: ನೊಯ್ದಾ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರೇವ್ ಪಾರ್ಟಿಗಾಗಿ ಹಾವಿನ ವಿಷ ಬಳಕೆ ಪ್ರಕರಣ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಯೂಟ್ಯೂಬರ್, ಪ್ರಭಾವಿ ಮತ್ತು ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ ವೇಳೆ 20 ಮಿ ಲೀ ವಿಷ ಹಾಗೂ ರೇವ್ ಪಾರ್ಟಿ ಸಮಯದಲ್ಲಿ ಬಳಕೆಯಾಗಿರುವ 9 ವಿಷಕಾರಿ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 5 ನಾಗರಹಾವು, 1 ಹೆಬ್ಬಾವು ಮತ್ತು 1 ಎರಡು ತಲೆಯ ಹಾವು, ಒಂದು ಕೇರೆ ಹಾವು ವಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಎನ್ಜಿಒ, ಹಾವಿನ ವಿಷ ಬಳಕೆಯ ರೇವ್ ಪಾರ್ಟಿ ವಿರುದ್ಧ ದೂರು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಎಲ್ವಿಶ್ ಯಾದವ್ ಅವರನ್ನು ಸಂಪರ್ಕಿಸಿ ನಾಗರಹಾವಿನ ವಿಷವನ್ನು ಪಡೆಯಲು ಕೇಳಿದರು. ಎಲ್ವಿಶ್ ತನ್ನ ಏಜೆಂಟರ ವಿವರಗಳನ್ನು ನೀಡಿ, ಅವರ ಫೋನ್ ಸಂಖ್ಯೆಯನ್ನು ಒದಗಿಸಿದ್ದರು. ಈ ಮಾಹಿತಿ ಬೆನ್ನತ್ತಿದ ಪೊಲೀಸರು ಏಜೆಂಟ್’ನನ್ನ ಸಂಪರ್ಕಿಸಿದಾಗ ಆತ ಹಾವು ಮತ್ತು ಹಾವಿನ ವಿಷವನ್ನು ನೀಡಲು ಒಪ್ಪಿಕೊಂಡ. ಬಳಿಕ ರೇವ್ ಪಾರ್ಟಿ ಸ್ಥಳಕ್ಕೆ ತೆರಳಿದಾಗ ಈ ಮಾಫಿಯಾದ ವಿರಾಟ್ ಸ್ವರೂಪ ಅನಾವರಣವಾಯಿತು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಎಲ್ವಿಶ್ ಯಾದವ್ ಹೆಸರನ್ನು ಉಲ್ಲೇಖಿಸಿದ್ದಾರೆ. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.