‘ವಕ್ಫ್‌ಗೆ ಸಂಬಂಧಿಸಿದ ಜಮೀನು ವಿವಾದ ಬಂದರೆ ಅದನ್ನು ವಕ್ಫ್‌ನಲ್ಲೇ ಬಗೆಹರಿಸಬೇಕು’

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನೀಡುವ ನೋಟಿಸ್‌ಗೆ ಯಾವುದೇ ಬೆಲೆ ನೀಡುವುದಿಲ್ಲ. ವಕ್ಫ್‌ ಮಂಡಳಿ ಮಾಡುತ್ತಿರುವ ಭೂ ಕಬಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ, ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕನಾಗಿ ನಾನು ಎಲ್ಲಿ ಬೇಕಾದರೂ ಓಡಾಡಬಹುದು. ಆ ಅಧಿಕಾರ, ಸ್ವಾತಂತ್ರ್ಯ ನನಗಿದೆ. ಅದಕ್ಕಾಗಿ ವಕ್ಫ್‌ ಭೂಮಿ ಕಬಳಿಸಿದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಚಂದ್ಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಣ್ಣ ಮುಂದೆ ಇರುವ ಶಾಲೆ ಪಹಣಿಯಲ್ಲಿ ಖಬರಸ್ಥಾನ ಆಗಿದೆ. ಇದು ಹೆಣ ಹೂಳುವ ಜಾಗವೇ ಎಂದು ಗ್ರಾಮಸ್ಥರೇ ಹೇಳಬೇಕು. ನಮ್ಮ ಶಾಲೆ ನಮ್ಮ ಹಕ್ಕು ಎಂಬ ಘೋಷಣೆಯಡಿ ಹೋರಾಟ ಮಾಡಬೇಕು ಎಂದರು.

ಯಾವುದೇ ಜಮೀನು ತಕಾರರು ಬಂದರೆ ಜಿಲ್ಲಾಧಿಕಾರಿಗೆ ಅರ್ಜಿ ನೀಡಬೇಕು. ಆದರೆ ವಕ್ಫ್‌ಗೆ ಸಂಬಂಧಿಸಿದ ಜಮೀನು ವಿವಾದ ಬಂದರೆ ಅದನ್ನು ವಕ್ಫ್‌ನಲ್ಲೇ ಬಗೆಹರಿಸಬೇಕೆಂದು ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಕಾನೂನು ತಿದ್ದುಪಡಿ ಮಾಡಿದೆ. ಇದರಿಂದಾಗಿ ಜನರ ಜಮೀನು ಕಬಳಿಕೆಯಾಗುತ್ತಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಆಸ್ತಿ ಮುಜರಾಯಿ ಇಲಾಖೆಯಡಿ ಬಂದು ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ಮುಸ್ಲಿಂ ಸಂಸ್ಥೆಗಳ ಆಸ್ತಿ ಮಾತ್ರ ವಕ್ಫ್‌ ಅಡಿ ಬರುತ್ತದೆ ಎಂದು ದೂರಿದರು.

ವಿರಕ್ತ ಮಠದ ಆಸ್ತಿಯನ್ನು ಪಹಣಿಯಲ್ಲಿ ವಕ್ಫ್‌ ಭೂಮಿ ಎಂದು ಬರೆಯಲಾಗಿದೆ. ಇದರಿಂದಾಗಿ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. 15 ಸಾವಿರ ಎಕರೆ ಜಾಗವನ್ನು ವಕ್ಫ್‌ಗೆ ಬರೆಯಲಾಗಿದೆ. ದೇಶ, ಧರ್ಮ, ಕನ್ನಡ ಭಾಷೆ ಉಳಿಯಲು ಇದರ ವಿರುದ್ಧ ಹೋರಾಡಬೇಕಿದೆ. ರಾಜ್ಯದ ಪ್ರತಿಯೊಬ್ಬರೂ ಪಹಣಿಯಲ್ಲಿ ಪರಿಶೀಲಿಸಬೇಕು. ಅದರಲ್ಲಿ ವಕ್ಫ್‌ ಎಂದು ಇದ್ದರೆ, ನನಗೆ ತಿಳಿಸಿದರೆ ಬಂದು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ, ನೋಟಿಸ್‌ ರದ್ದಾಗುವುದರಿಂದ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿ ಮಾಡಿದ ಆದೇಶ ರದ್ದಾಗಬೇಕು. ವಕ್ಫ್‌ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್‌ ಲೂಟಿ ಮಾಡಲು ಮುಂದಾಗಿದೆ. ರಾಜಕೀಯವಾಗಿ ಇದನ್ನು ನಾವು ಬಳಸಿಕೊಳ್ಳುವುದಿಲ್ಲ. ಕೂಡಲೇ ವಕ್ಫ್‌ ಬೋರ್ಡ್‌ನ ಆಸ್ತಿ ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡಿ. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಭಾರತಮಾತೆಯ ಜಮೀನು, ಯಾವುದೇ ಸಮುದಾಯದ ಆಸ್ತಿಯಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದನ್ನು ಈ ಸರ್ಕಾರ ನಿಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಸಾಮ್ರಾಟ್‌ ಆಗಲು ಯತ್ನಿಸುತ್ತಿದ್ದಾರೆ ಎಂದರು.

Related posts