ವಿಜಯುಪುರ : ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದರಿಂದ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರನ್ನು ಸೆಳೆಯಲು ಬಿಜೆಪಿ ನಾಯಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬಳಕೆ ಮಾಡಿಕೊಂಡು ಬಿಸಾಡಲು ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗಷ್ಟೇ ವಿಜಯೇಂದ್ರ ಅವರ ನೇಮಕ ಎಂಬಂತೆ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ ಎಂದು ಬೊಒಟ್ಟು ಮಾಡಿದರು. ವಿಜಯೇಂದ್ರ ನೇಮಕ ಬಹಳ ವರ್ಷ ಇರಲ್ಲ ಎಂಬ ಪರೋಕ್ಷ ಸಂದೇಶವನ್ನು ಬಿಜೆಪಿ ನಾಯಕರೇ ನೀಡಿದ್ದಾರೆ ಎಂದ ಎಂ.ಬಿ.ಪಾಟೀಲ್, ಬಿಜೆಪಿಯವರು ಯಡಿಯೂರಪ್ಪ ಅವರನ್ನು ಯಾವಾಗ ಬೇಕಾದರೂ ಬಳಸಿ, ಬಿಸಾಡಬಹುದು. ಹಾಗಾಗಿ ಬಿಜೆಪಿ ನಾಯಕರ ಹುನ್ನಾರಕ್ಕೆ ಲಿಂಗಾಯತರು ಬಲಿಯಾಗುವುದಿಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲೇ ಲಿಂಗಾಯತರು ಬಿಜೆಪಿ ಪಕ್ಷದಿಂದ ವಿಮುಖರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಲಿಂಗಾಯತರನ್ನು ಸೆಳೆಯುವ ಬಿಜೆಪಿ ಹುನ್ನಾರ ಕೈಗೂಡದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.