ನವಿಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಈ ಸಾಧನೆ ಸಾಧಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರೀ ನಗದು ಬಹುಮಾನ ಘೋಷಿಸಿದೆ.
ಟೀಮ್ ಇಂಡಿಯಾ ಪ್ರದರ್ಶನದಿಂದ ಸಂತೋಷಗೊಂಡ ಬಿಸಿಸಿಐ, ಒಟ್ಟು ₹51 ಕೋಟಿ ರೂಪಾಯಿಗಳನ್ನು ನಗದು ಬಹುಮಾನವಾಗಿ ನೀಡಲಿದೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಿಸಿದ್ದಾರೆ.
ಸೈಕಿಯಾ ಅವರು, “ಈ ಐತಿಹಾಸಿಕ ಗೆಲುವು ದೇಶದ ಕ್ರಿಕೆಟ್ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ. ಟೀಮ್ ಇಂಡಿಯಾದ ಸಾಹಸ, ಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಅಭಿನಂದನೆ ಸಲ್ಲಿಸಲು ಬಿಸಿಸಿಐ ಈ ನಗದು ಬಹುಮಾನ ನೀಡುತ್ತಿದೆ,” ಎಂದು ತಿಳಿಸಿದ್ದಾರೆ.
ಈ ಬಹುಮಾನ ಮೊತ್ತವನ್ನು ಟೀಮ್ ಇಂಡಿಯಾ ಆಟಗಾರರು, ಆಯ್ಕೆದಾರರು ಹಾಗೂ ಕೋಚ್ ಅಮೋಲ್ ಮುಝುಂದಾರ್ ಅವರ ನೇತೃತ್ವದ ಸಹಾಯಕ ಸಿಬ್ಬಂದಿ ನಡುವೆ ಹಂಚಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಮಹಿಳಾ ತಂಡದ ಈ ಚೊಚ್ಚಲ ವಿಶ್ವಕಪ್ ಜಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಉತ್ಸಾಹ ಮತ್ತು ಹೆಮ್ಮೆಯ ಭಾವನೆಯನ್ನು ತುಂಬಿದೆ.
