‘ವೈದ್ಯರ ಮರುಹೊಂದಾಣಿಕೆ ಹೊರತು ಆಸ್ಪತ್ರೆಗಳ ಮುಚ್ಚುವಿಕೆಯಲ್ಲ’; ಸರ್ಕಾರದ ಸ್ಪಷ್ಟನೆ

ಬೆಂಗಳೂರು: ‘ನಾವು ಯಾವುದೇ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚುತ್ತಿಲ್ಲ’ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲಾಗುತ್ತಿದೆ ಎಂಬ ವದಂತಿಗಳ ಬಗ್ಗೆ ಹಾಗೂ ಈ ಕುರಿತ ಮಾಧ್ಯಮ ವರದಿಗಳನ್ನು ಮುಂದಿಟ್ಟು ಪ್ರತಿಪಕ್ಷಗಳು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಸ್ಪಷ್ಟನೆ ನೀಡಿದ್ದಾರೆ.

ಜೆಡಿಎಸ್ ನಾಯಕರು ಅಧಿಕಾರಕ್ಕಾಗಿ ಹತಾಶೆಗೊಂಡು ಇಷ್ಟೊಂದು ಕೆಳಮಟ್ಟದ ಸುಳ್ಳು ಸುದ್ದಿಗಳನ್ನು ಹರಡುವುದು ಶೋಭೆ ತರುವಂತದ್ದಲ್ಲ. ‘ನಾವು ಯಾವುದೇ ಸರ್ಕಾರಿ ಆಸ್ಪತ್ರೆಯನ್ನು ಮುಚ್ಚುತ್ತಿಲ್ಲ ಎನ್ನುವ ಕನಿಷ್ಠ ಜ್ಞಾನವಿಲ್ಲದೆ ಜನರ ದಾರಿ ತಪ್ಪಿಸುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ಗುರಿ ಬಡವರ ಜೀವ ಉಳಿಸುವುದು, ಸುಳ್ಳು ಹೇಳುವುದಲ್ಲ’ ಎಂದು ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಎಂದಿಗೂ ಬಡವರ ಪರವಾಗಿದೆ. ನಾವು ಮಾಡುತ್ತಿರುವುದು ವೈದ್ಯರ ಮರುಹೊಂದಾಣಿಕೆ (Rationalization) ಹೊರತು ಆಸ್ಪತ್ರೆಗಳ ಮುಚ್ಚುವಿಕೆಯಲ್ಲ’ ಎಂದು ಟೀಕಾಕಾರರಿಗೆ ಎದಿರೇಟು ನೀಡಿದ್ದಾರೆ.

ಈ ಬಗ್ಗೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ ಸಂದರ್ಭದಲ್ಲೇ ಈ ಸ್ಪಷ್ಟನೆಯನ್ನು ಇಡೀ ಸದನದ ಗಮನಕ್ಕೆ ತರಲಾಗಿದೆ. ಅದಾಗ್ಯೂ, ಈ ರೀತಿ ವರ್ತಿಸುತ್ತಿರುವ ಜೆಡಿಎಸ್‌ ನಾಯಕರು ಅಧಿವೇಶನದಲ್ಲಿ ಗಂಭೀರವಾಗಿ ಭಾಗವಹಿಸಿಲ್ಲ ಹಾಗೂ ತಮ್ಮ ಮಿತ್ರಪಕ್ಷದ ನಾಯಕರಿಂದಲೂ ಸತ್ಯ ತಿಳಿಯುವ ಪ್ರಯತ್ನ ಮಾಡಿಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

‘ತಾಲ್ಲೂಕು ಆಸ್ಪತ್ರೆಗಳಲ್ಲಿ 24/7 ಸೌಲಭ್ಯ ನೀಡುವ ಮೂಲಕ ಬಾಣಂತಿಯರು ಮತ್ತು ಶಿಶುಗಳ ಸಾವನ್ನು ತಡೆಯಲು ಮುಂದಾಗಿದ್ದೇವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 24/7 ಗಂಟೆಯೂ ಸಿಸೇರಿಯನ್ ಸೇರಿ ಎಲ್ಲಾ ಹೆರಿಗೆ ಸೇವೆಗಳು ಸಿಗಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ಇಬ್ಬರು ಗೈನಾಕಾಲಜಿಸ್ಟ್, ಒಬ್ಬರು ಮಕ್ಕಳ ತಜ್ಞರು, ಇಬ್ಬರು ಅರಿವಳಿಕೆ ಹಾಗೂ ರೆಡಿಯಾಲಜಿಸ್ಟ್‌ ತಜ್ಞರನ್ನು ನಿಯೋಜಿಸಿ, ಬಡವರು ಮಧ್ಯರಾತ್ರಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ಓಡುವುದು ತಪ್ಪುವಂತೆ ಮಾಡುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಗಳ ಬಲವರ್ಧನೆಗಾಗಿ ಅಲ್ಲಿಯೂ ಮೂವರು ವೈದ್ಯರನ್ನು ನೇಮಿಸಿ 24/7 ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುವ 42 ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ (CHC) ದಿನದ 24/7 ಘಂಟೆಗಳು ಸಮಗ್ರ ತುರ್ತು ಪ್ರಸೂತಿ ಮತ್ತು ನವಜಾತ ಶಿಶು ಆರೈಕೆ (CEmONC) ಸೇವೆಗಳನ್ನು ಒದಗಿಸಲಾಗುತ್ತದೆ. ಈ ಬಗ್ಗೆ ಒಂದು ತಿಂಗಳ ಹಿಂದೆಯೇ ಇಲಾಖೆ ಆದೇಶವನ್ನು ಮಾಡಲಾಗಿದೆ ಎಂದಿದ್ದಾರೆ.

ಅಂಕಿ-ಅಂಶಗಳೇ ನಮ್ಮ ಕೆಲಸಕ್ಕೆ ಸಾಕ್ಷಿ. ಟೀಕೆ ಮಾಡುವ ಮೊದಲು ನಮ್ಮ ಇಲಾಖೆಯ ಈ ಸಾಧನೆಗಳನ್ನು ಒಮ್ಮೆ ಕಣ್ಣು ತೆರೆದು ನೋಡಿ ಎಂದಿರುವ ಅರೋಗ್ಯ ಸಚಿವರು, ಬಾಣಂತಿಯರ ಸಾವು 24% ರಷ್ಟು ಇಳಿಕೆಯಾಗಿದೆ. ಡೆಂಗ್ಯು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದೇವೆ. ಪುನೀತ್ ಹೃದಯ ಯೋಜನೆ ಅಡಿಯಲ್ಲಿ 7,000ಕ್ಕೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ. ಗೃಹ ಆರೋಗ್ಯ ಯೋಜನೆಯಡಿ ಒಂದು ಕೋಟಿ ಜನರಲ್ಲಿ ಉಚಿತ ಮಧುಮೇಹ ತಪಾಸಣೆ ನಡೆಸಿ, ಮಧುಮೇಹ ಪತ್ತೆಯಾದವರಿಗೆ ಉಚಿತ ಔಷಧಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ರೀತಿಯಾಗಿ, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ರೋಗದ ಉಚಿತ ತಪಾಸಣೆ-ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ರಕ್ತದೊತ್ತಡ ಸೇರಿದಂತೆ ಇತರೆ ಹಲವು ಬಗೆಯ ರೋಗಗಳ ತಪಾಸಣೆಗೆ ಒತ್ತು ನೀಡಿದ್ದೇವೆ. 2025-2026ನೇ ಸಾಲಿನಲ್ಲಿ ಆಶಾಕಿರಣ ಯೋಜನೆಯಡಿ ಲಕ್ಷಾಂತರ ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ 1.8 ಲಕ್ಷ ಜನರಿಗೆ ಉಚಿತ ಕನ್ನಡಕ ಮತ್ತು 54,097 ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಿದ್ದು, 2.95 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದಿದ್ದಾರೆ.

ಆರಂಭದಲ್ಲೇ ರೋಗಗಳನ್ನು ಪತ್ತೆ ಹಚ್ಚಿ ಉಚಿತ ಚಿಕಿತ್ಸೆ ನೀಡುವುದರಿಂದ ಜನಸಾಮಾನ್ಯರ ಹಣ, ಆರೋಗ್ಯ, ಜೀವ ಉಳಿಸಬಹುದು ಹಾಗೂ ಅವರನ್ನು ಮಾನಸಿಕವಾಗಿ ಕುಗ್ಗದಂತೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತು ನಡೆಯುತ್ತಿದ್ದೇವೆ. ಅಲ್ಲದೆ, ಈ ಹಿಂದೆ ಯಾವ ಸರ್ಕಾರವೂ ಮಾಡದ ಐತಿಹಾಸಿಕ ಕೆಲಸವನ್ನು ನಾವು ಮಾಡಿದ್ದೇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೌನ್ಸಿಲಿಂಗ್‌ ಮೂಲಕ 5,500 ಕ್ಕೂ ಹೆಚ್ಚು ಅರ್ಹ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದೆಲ್ಲವೂ ಇಲಾಖೆಯ ಕೆಲಸಗಳ ಗುಣಮಟ್ಟ ಸುಧಾರಣೆ ಹಾಗೂ ನಾಡಿನ ಜನರ ಹಿತದೃಷ್ಟಿಯಿಂದ ಮಾಡಿರುವಂತದ್ದು ಎಂದಿದ್ದಾರೆ.

ಇದು ಕೆಲವು ಆಯ್ದ ಕಾರ್ಯಕ್ರಮಗಳ ಸಾಧನೆ, ಉಳಿದಂತೆ ಇಲಾಖೆ ಸಂಪೂರ್ಣ ಸಾಧನೆಗಳ ಮಾಹಿತಿ ಸಿಗುವಂತೆ ಪಾರದರ್ಶಕ ಆಡಳಿತ ನಡೆಸಲಾಗುತ್ತಿದೆ. ಕೇಳಿದ್ದರೆ ನಾವೇ ಖುದ್ದು ಮಾಹಿತಿ ಕೊಡುತ್ತಿದ್ದೆವು, ಓದಿ ಮನನ ಮಾಡಿಕೊಂಡು ನಮ್ಮ ತಪ್ಪಿದ್ದರೆ ನಂತರ ಟೀಕಿಸಬಹುದಿತ್ತು. ಆದರೆ, ಸುಳ್ಳು ಬಿತ್ತಿ ಜನರ ನಂಬಿಕೆ ಕಸಿಯುವ ಬರದಲ್ಲಿ ನೀವೇ ಜನರ ಮುಂದೆ ಬೆತ್ತಲಾಗುತ್ತಿದ್ದೀರಿ. ಅಭಿವೃದ್ಧಿ ಕೆಲಸಗಳನ್ನು ನೋಡಿ ಹತಾಶರಾಗಿದ್ದೀರಿ ಹಾಗಾಗಿ ಇಲ್ಲಸಲ್ಲದ ವದಂತಿ ಹರಡಿ ಜನರ ಮನಸ್ಸು ಕದಡುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.

ಟೀಕೆ ಮಾಡುವುದಿದ್ದರೆ ನೈಜ ಕಾರಣಗಳ ಮೇಲೆ ಮಾಡಿ. ಕಲ್ಪಿತ ಸುಳ್ಳುಗಳ ಮೂಲಕ ಜನರ ದಿಕ್ಕು ತಪ್ಪಿಸಬೇಡಿ. ನಿಮ್ಮ ಈ ರಾಜಕೀಯ ಗಿಮಿಕ್ ಬಡವರ ಆರೋಗ್ಯದ ಮುಂದೆ ನಡೆಯುವುದಿಲ್ಲ. ಮತ್ತೊಮ್ಮೆ ಘಂಟಾಘೋಷವಾಗಿ ಹೇಳುತ್ತಿದ್ದೇನೆ ಯಾವುದೇ ಸರ್ಕಾರಿ ಆಸ್ಪತ್ರೆಗಳು ಮುಚ್ಚುತ್ತಿಲ್ಲ, ಬದಲಾಗಿ ಸೇವೆಯ ಗುಣಮಟ್ಟ ಹೆಚ್ಚುತ್ತಿದೆ ಎಂದಿರುವ ದಿನೇಶ್ ಗುಂಡೂರಾವ್, ಇಂತಹ ಕುತಂತ್ರದ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

Related posts