ತುಮಕೂರು: ಗುಬ್ಬಿ ಸಮೀಪ ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಸಂಗ್ರಹಿಸಲಾಗಿದ್ದ ಜಲ್ಲಿ ಕಲ್ಲುಗಳ ನಡುವೆ ಉಳಿದಿದ್ದ ಜೆಲಟಿನ್ ಕಡ್ಡಿ ಬಗ್ಗೆ ಅರಿಯದ ವಿದ್ಯಾರ್ಥಿಯೊಬ್ಬ ಕುತೂಹಲದಲ್ಲಿ ಜೆಲಟಿನ್ ಕಡ್ಡಿ ಮುಟ್ಟಿ ಸ್ಫೋಟ ಉಂಟಾಗಿ ವಿದ್ಯಾರ್ಥಿ ಕೈ ಬೆರಳುಗಳು ತುಂಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಸರಾ ರಜೆ ಹಿನ್ನಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸ್ ಗಾಗಿ ಆಗಮಿಸಿದ್ದ. ಆ ವೇಳೆ ವಿದ್ಯಾರ್ಥಿಯು ಕಲ್ಲು ಬಂಡೆ ಚೂರುಗಳ ಮಧ್ಯೆ ಕಂಡ ವೈರ್ ಸಹಿತ ಇದ್ದ ಜೆಲಟಿನ್ ಕಡ್ಡಿ ಕಂಡು ಕುತೂಹಲದಿಂದ ತೆಗೆದುಕೊಂಡು ಶಾಲಾ ಆವರಣದಲ್ಲಿ ತೆರಳಿದ ಎನ್ನಲಾಗಿದೆ. ನಂತರ ಬಿಸಿಯಾದ ಅನುಭವಕ್ಕೆ ಭಯಗೊಂಡು ಜೆಲಟಿನ್ ಕಡ್ಡಿ ಎಸೆಯಲು ಮುಂದಾದಾಗ ಸ್ಫೋಟಗೊಂಡು ಬಲಗೈ ಬೆರಳುಗಳು ತುಂಡಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿದರು.