ಸಂಪುಟದಿಂದ ಸಚಿವ ಜಮೀರ್ ಅಹ್ಮದ್ ವಜಾಕ್ಕೆ ಜೆಡಿಎಸ್ ಆಗ್ರಹ

ಬೆಂಗಳೂರು: ವಂಚಕ ಸಂಬಂಧಿಗೆ ಸಹಾಯ ಮಾಡಲು ಪೊಲೀಸರಿಗೆ ಸಚಿವ ಜಮೀರ್ ಅಹ್ಮದ್ ಅವರು ಒತ್ತಡ ಹೇರಿದ್ದಾರೆ ಎನ್ನಲಾದ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ವಂಚನೆ ಪ್ರಕರಣದಲ್ಲಿ ತಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್‌ ಅಧಿಕಾರಿಗೆ ಫೋನ್‌ ಮಾಡಿ ಶಿಫಾರಸ್ಸು ಮಾಡಿರುವ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಅವರು, ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದೆ.

ಪೊಲೀಸರಿಗೆ ಸಚಿವ ಜಮೀರ್ ಅಹ್ಮದ್ ಅವರು ಒತ್ತಡ ಹೇರಿದ್ದಾರೆ ಎನ್ನಲಾದ ಫೋನೋ ಆಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿರುವ ಜೆಡಿಎಸ್, ರಾಜ್ಯದ ರೈತರಿಗೆ ವಂಚಿಸಿರುವ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್‌ ಅಧಿಕಾರಿಗೆ ಫೋನ್‌ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ. ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ? ಎಂದು ಪ್ರಶ್ನಿಸಿದೆ.

‘ಗೃಹ ಸಚಿವ ಪರಮೇಶ್ವರ್ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು ಪೊಲೀಸ್‌ ಇಲಾಖೆ ಸೆಟಲ್‌ಮೆಂಟ್‌ ಕೇಂದ್ರಗಳಾಗಿವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ’ ಎಂದು ಉದಾಹರಿಸಿರುವ ಜಾತ್ಯತೀತ ಜನತಾ ದಳ ಪಕ್ಷ, ‘ಸಿಎಂ ಸಿದ್ದರಾಮಯ್ಯ ಅವರೇ, ಸದಾ ರೌಡಿಗಳು ಹಾಗೂ ವಂಚಕರ ಪರ ವಹಿಸುವ ಸೆಟಲ್‌ಮೆಂಟ್‌ ಸಚಿವ ಜಮೀರ್‌ ಅವರನ್ನು ಸಂಪುಟದಿಂದ ವಜಾ ಮಾಡಿ. ನಿಮ್ಮ ನೈತಿಕತೆ ಪ್ರದರ್ಶಿಸಿ’ ಎಂದು ಒತ್ತಾಯಿಸಿದೆ.

Related posts