ಬೆಂಗಳೂರು: ಸಾರಿಗೆ ಇಲಾಖೆ ( RTO) ಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮೋಟಾರು ವಾಹನ ನಿರೀಕ್ಷಕರೊಬ್ಬರು ಸರ್ಕಾರಿ ವಾಹನದಲ್ಲಿ ಕುಳಿತು ಹಣ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಆರೋಪ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಸಚಿವರು ಆದೇಶಿಸಿದ್ದಾರೆ.
ಆ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಮಂಡ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು, ಆರೋಪಕ್ಕೆ ಗುರಿಯಾಗಿರುವ ಮೋಟಾರು ವಾಹನ ನಿರೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ನೌಕರರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುವುದರಿಂದ ಸಾರಿಗೆ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರಿಯು ಮೋಟಾರು ವಾಹನ ನಿರೀಕ್ಷಕರಾದ ವಾಣಿಶ್ರೀ ಎಂ.ಎನ್ ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಮಂಡ್ಯ ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಧಾರವಾಡ (ಪಶ್ಚಿಮ) ಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.