ಸಿಎಂ ರಾಜೀನಾಮೆ, ಡಾ.ಯತೀಂದ್ರ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಹಾಗೂ ವರ್ಗಾವಣೆ ದಂಧೆ ಮಾಡುತ್ತಿರುವ ಡಾ.ಯತೀಂದ್ರರನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಸರಕಾರ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯರು ಅಧಿಕಾರ ಮಾಡುತ್ತಿಲ್ಲ. ಜಿಪಿಎ ಹೊಂದಿದ ಡಾ. ಯತೀಂದ್ರರು ಅಧಿಕಾರ ಮಾಡುತ್ತಿದ್ದಾರೆ. ಎಲ್ಲ ತೀರ್ಮಾನಗಳನ್ನು ಯತೀಂದ್ರರೇ ತೆಗೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಹೀಗೆ ಮಾಡಲು ಬರುವುದಿಲ್ಲ ಎಂದು ನುಡಿದರು.

ಇಂದು ನಿಮ್ಮ ಪ್ರಮಾಣವಚನಕ್ಕೆ ವಿರುದ್ಧವಾಗಿ ಡಾ.ಯತೀಂದ್ರರಿಂದ ಅಧಿಕಾರ ನಡೆದಿದೆ. ಸಿದ್ದರಾಮಯ್ಯನವರು 25 ವರ್ಷಗಳ ಹಿಂದಿನ ವ್ಯಕ್ತಿ ಆಗಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತಾರೆ. ಪರಿವರ್ತಿತ ಸಿದ್ದರಾಮಯ್ಯ ಆಗಿದ್ದರೆ ಭಂಡತನದಿಂದ ಹೀಗೇ ನಡೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.

ಡಾ.ಯತೀಂದ್ರ ಸಿದ್ದರಾಮಯ್ಯನವರ ವಿಡಿಯೋವೊಂದು ಟಿ.ವಿ.ಚಾನೆಲ್‍ಗಳಲ್ಲಿ ಪ್ರಸಾರವಾಗುತ್ತಿದ್ದು, ರಾಜ್ಯದ ಜನರು ನೋಡುತ್ತಿದ್ದಾರೆ. ಈಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಸೇರಿ ಎಲ್ಲ ಮುಖ್ಯಮಂತ್ರಿಗಳ ಕುಟುಂಬಗಳು ಭ್ರಷ್ಟಾಚಾರದಲ್ಲಿ ತೊಡಗಿದೆ; ಅವರ ಮಕ್ಕಳಿಂದ ಅಧಿಕಾರ ದುರುಪಯೋಗ ಆಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು ಎಂದು ವಿವರಿಸಿದರು.

ಡಾ.ಯತೀಂದ್ರರ ಈ ವಿಡಿಯೋ ಬಿಡುಗಡೆ ಆದ ಬಳಿಕ ಈಗ ಸಿದ್ದರಾಮಯ್ಯನವರು ಏನು ಹೇಳುತ್ತಾರೆ ಎಂದು ಕೇಳಿದರು. ಸಿಎಸ್‍ಆರ್ ಫಂಡ್‍ಗಾಗಿ ಕೇಳಿದ್ದೆಂದು ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ಸಿದ್ದರಾಮಯ್ಯನವರು 25 ವರ್ಷಗಳ ಹಿಂದೆ ಇಷ್ಟು ಸುಳ್ಳುಗಾರ ಆಗಿರಲಿಲ್ಲ ಎಂದು ತಿಳಿಸಿದರು. ಆಗಿನ ಅವರ ಕಾರ್ಯವೈಖರಿ, ನಡೆನುಡಿ ಬೇರೆಯಾಗಿತ್ತು. ಕಾಂಗ್ರೆಸ್‍ಗೆ ಸೇರಿದ ಮೇಲೆ ಬಹಳ ಬದಲಾವಣೆ ಆಗಿದೆ ಎಂದು ಟೀಕಿಸಿದರು.

ವರ್ಗಾವಣೆ ದಂಧೆ ಮಾಡಿಲ್ಲ; ಅದೇನಾದರೂ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಯತೀಂದ್ರ ಸಿದ್ದರಾಮಯ್ಯನವರು ಟ್ರಾನ್ಸ್‍ಫರ್ ದಂಧೆ ಬಗ್ಗೆಯೇ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಸಿಎಸ್‍ಆರ್ ಫಂಡ್ ಆಗಿದ್ದರೆ ವಿವೇಕಾನಂದ ಯಾರು? ಮಹದೇವ್ ಅವರಿಗೆ ಫೋನ್ ಮಾಡಿ ನಾನು ಕೊಟ್ಟ 5 ಹೆಸರನ್ನು ಮಾತ್ರ ಮಾಡಬೇಕಿತ್ತು ಎಂದಿದ್ದಾರೆ. ಸಿದ್ದರಾಮಯ್ಯನವರು ವಿಷಯವನ್ನು ತಿರುಚಿ ಸುಳ್ಳು ಹೇಳುತ್ತಿದ್ದಾರೆ. ಈ ವಿಡಿಯೋಗಿಂತ ದೊಡ್ಡ ಸಾಕ್ಷಿ ಏನು ಬೇಕು ನಿಮಗೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಇಷ್ಟು ಮಾತ್ರವಲ್ಲ; ನಿಮ್ಮ ಮಗ ಯತೀಂದ್ರನವರೇ ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ನಿಮ್ಮ ಕಾರ್ಯದರ್ಶಿ ಮಹದೇವ್‍ರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೆ ಅಧಿಕಾರ ದುರುಪಯೋಗ ಆಗಿರಲಿಲ್ಲ; ನಿಮ್ಮ ಅವಧಿಯಲ್ಲಿ ಸಂಪೂರ್ಣ ಭ್ರಷ್ಟಾಚಾರ ನಡೆದಿದೆ; ಕಾಂಗ್ರೆಸ್ ಸರಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆಕ್ಷೇಪಿಸಿದರು.

Related posts