ಬೆಂಗಳೂರು: ಸಿಎ ನಿವೇಶನ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕನ ಅನರ್ಹತೆಗೆ ಪ್ರತಿಕ್ಷಗಳು ಪಟ್ಟುಹಿಡಿದಿವೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ವಿಧಾನಸಭೆಗಿಂತಲೂ ಹೆಚ್ಚು ವಿಧಾನ ಪರಿಷತ್ತಿಗೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಯಾಗಿತ್ತು. ಇದರ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸ್ವಜನ ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿದರು.
ಸಿಎ ನಿವೇಶನ ಪಡೆಯಲು ಅಕ್ರಮ ಎಸಗಿರುವ ವಿಧಾನಪರಿಷತ್ ಬಿಜೆಪಿ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಅವರನ್ನು ಎರಡೂ ಸ್ಥಾನದಿಂದ ಅನರ್ಹ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ ಮಾಜಿ ಸದಸ್ಯರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದವರು ತಿಳಿಸಿದರು.
24.11.2002 ರಿಂದ 05.05.2005 ರ ವರೆಗೆ ಕರ್ನಾಟಕ ಗೃಹ ಮಂಡಳಿ ಸದಸ್ಯರಾಗಿದ್ದ ನಾರಾಯಣಸ್ವಾಮಿ ಅವರು ಈ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹೊಸಕೋಟೆಯ ವೀರೇಂದ್ರ ಸಿಂಗ್ ಅವರ ಕುಟುಂಬದ ಭೂಮಿಯನ್ನು ಕೆಎಚ್ ಬಿ ಸ್ವಾಧೀನ ಪಡಿಸಿಕೊಂಡಿರುತ್ತದೆ. ಈ ಕುಟುಂಬದವರು 20.11.2003 ರಲ್ಲಿ ಉಳಿಕೆ ಜಮೀನನ್ನು ಮರಳಿ ನೀಡಿ ಎಂದು ಕೆಎಚ್ ಬಿಗೆ ಅರ್ಜಿ ನೀಡುತ್ತಾರೆ. ಇದೇ ವೇಳೆ ನಾರಾಯಣಸ್ವಾಮಿ ಅವರು ಸದಸ್ಯರಾಗಿದ್ದರು. ಅವರಿಗೆ ನಿವೇಶನ ಹಂಚಿಕೆ ಮಾಡಿಕೊಳ್ಳಲು ಬರುವುದಿಲ್ಲ. ಆದರೆ ಇವರು ಶಾಲೆಯನ್ನು ಕಟ್ಟಲು ಸಿಎ ನಿವೇಶನವನ್ನು 26.05.2004 ರಂದು ಪಡೆಯುತ್ತಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು 25,841 ಅಡಿ ನಿವೇಶನವನ್ನು ಅಕ್ರಮವಾಗಿ ಪಡೆಯುತ್ತಾರೆ. 12,27,479 ರೂಪಾಯಿ ಹಣವನ್ನು 25.07.2004 ರಲ್ಲಿ ಕಟ್ಟುತ್ತಾರೆ ಎಂದು ವಿವರಿಸಿದರು.
ಶಾಲಾ ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸಬೇಕು. ಮುಂದಿನ 5 ವರ್ಷಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ ಪೂರ್ಣಗೊಳಿಸಬೇಕು ಇಲ್ಲದಿದ್ದರೇ ಮರಳಿ ಪಡೆಯಲಾಗುವುದು ಎಂದು ಕೆಎಚ್ ಬಿ ತಿಳಿಸುತ್ತದೆ. ಆನಂತರ 28.07.2006 ರಲ್ಲಿ ಕ್ರಯಪತ್ರ ಆಗುವಾಗ ನಿವೇಶನ ಪಡೆದ ಉದ್ದೇಶ ಬದಲಾವಣೆ ಮಾಡಿದ್ದಾರೆ. ಟೆಲಿ ಕಮ್ಯೂನಿಕೇಶನ್ ಮತ್ತು ಪಬ್ಲಿಕ್ ಸರ್ವೀಸ್ ಎಂದು ಬದಲಾಯಿಸುತ್ತಾರೆ. ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿವೇಶನವನ್ನು ಅಕ್ರಮವಾಗಿ ಉಪಯೋಗಿಸುತ್ತಿದ್ದಾರೆ ಎಂದು ದೂರಿದರು.
ಯಾವುದೇ ಸಂಘ, ಸಂಸ್ಥೆಗಳಿಗೆ ಸಿಎ ನಿವೇಶನ ಮಂಜೂರು ಮಾಡುವಾಗ ಟ್ರಸ್ಟ್ ಡೀಡ್, ಬೈಲಾ ಹಾಗೂ ಮೂರು ವರ್ಷಗಳ ಲೆಕ್ಕಪರಿಶೋಧನೆ ಆಗಿರಬೇಕು. ಇವುಗಳನ್ನು ಯಾವುದೇ ದಾಖಲೆಗಳನ್ನು ನಾರಾಯಣಸ್ವಾಮಿ ಅವರು ಕೊಟ್ಟಿಲ್ಲ ಎಂದು ದೂರಿದರು.
ಮೈಸೂರಿನ ಹೆಬ್ಬಾಳದಲ್ಲಿ ಕೈಗಾರಿಕಾ ನಿವೇಶವನ್ನು ಅಧಿಕಾರ ದುರುಪಯೋಗ ಮಾಡಿಕೊಂಡು ಪಡೆದಿದ್ದಾರೆ. ಭಾರತ ನ್ಯಾಯ ಸಂಹಿತಿ 316, 318 ಸೆಕ್ಷನ್ ಅಡಿ ಮೋಸ ಹಾಗೂ ನಂಬಿಕೆದ್ರೋಹ ಮಾಡಿರುವ ಕಾರಣಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನಾರಾಯಣಸ್ವಾಮಿ ಅವರು ಪಡೆದಿರುವ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ಇದ್ದು ಯಾವ, ಯಾವ ಬಿಜೆಪಿ ನಾಯಕರಿಗೆ ತಿನ್ನಿಸಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ದೇಶಕ್ಕೆಲ್ಲಾ ನೀತಿಪಾಠ ಮಾಡುತ್ತಾರೆ. ಸತ್ಯಹರಿಶ್ಚಂದ್ರರಂತೆ ನಡೆದುಕೊಳ್ಳುತ್ತಾರೆ ಎಂದು ರಮೇಶ್ ಬಾಬು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಈ ಎಲ್ಲಾ ದಾಖಲೆಗಳು ಎಲ್ಲಿಂದ ಸಿಗುತ್ತಿವೆ ಎಂದು ನೀವು ಪ್ರಶ್ನೆ ಮಾಡಬಹುದು. ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ನಾರಾಯಣಸ್ವಾಮಿ ಅವರು ಮುಂದಿನ ಬೆಂಚಿಗೆ ಬಂದ ಕಾರಣಕ್ಕೆ ನಿಮ್ಮ ಸ್ನೇಹಿತರೇ ಈ ದಾಖಲೆಗಳನ್ನು ನೀಡುತ್ತಿದ್ದಾರೆ ಎಂದರು.