‘2,000 ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದೀರಿ..?’

ಬೆಂಗಳೂರು: ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.

ಜಾತ್ಯತೀತ ಜನತಾದಳ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ವಿರುದ್ಧ ಸಂಸದ ಡಿ.ಕೆ.ಸುರೇಶ್ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದರು.  ನೈಸ್ ಯೋಜನೆಗಳ ಅಕ್ರಮಗಳಿಗೆ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೇರ ಕಾರಣ. ಈ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ನೈಸ್ ಅಕ್ಕಪಕ್ಕ ಜಮೀನುಗಳನ್ನು ಯಾರು ಕೊಳ್ಳೆ ಹೊಡೆದಿದ್ದಾರೆ ಎನ್ನುವುದೂ ತಿಳಿದಿದೆ ಎಂದು ಅವರು ಆರೋಪ ಮಾಡಿದರು.

ನೈಸ್ ಯೋಜನೆಗೆ ಸಹಿ ಹಾಕಿದ್ದು ಅಂದಿನ ಮುಖ್ಯಮಂತ್ರಿ ದೇವೇಗೌಡರು ಎಂದು ಡಿಕೆ ಸುರೇಶ್ ನೀಡಿದ್ದ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು; ದೇವೇಗೌಡರು ಸಹಿ ಹಾಕಿದ್ದು ರಸ್ತೆ ಮಾಡಲಿಕ್ಕೆ. ಅಲ್ಲಿನ ಭೂಮಿ ಲಪಟಾಯಿಸುವುದಕ್ಕೆ ಅಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು. ನೈಸ್ ವಿಚಾರ ಇಟ್ಟುಕೊಂಡು ಕುಮಾರಸ್ವಾಮಿ ವ್ಯವಹಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆಗೆ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿಗಳು; ಅವನ (ನೈಸ್) ಜತೆ ಶಾಮೀಲಾಗಿ ಜಮೀನು ಲೂಟಿ ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದ್ರಾ? ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ, ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಕಿಡಿಕಾರಿದರು.

ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ (ಫ್ರೇಮ್ ವರ್ಕ್ ಅಗ್ರಿಮೆಂಟ್) ಸಹಿ ಯಾರು ಹಾಕಿದ್ದು ಯಾರೆಂದು ಗೊತ್ತಿದೆಯಾ ಅವನಿಗೆ? ಆವತ್ತಿನ ನಗರಾಭಿವೃದ್ಧಿ ಸಚಿವರಾಗಿ ಇದ್ದಿದ್ದು ಯಾರು? ಇವನ ಅಣ್ಣನೇ ಅಲ್ವಾ? ಆತನೇ ತಾನೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು. ಲೂಟಿ ಹೊಡೆದ ಭೂಮಿಯನ್ನು ಯಾರ ಹೆಸರಿಗೆ ಮಾಡಲು ಹೊರಟಿದ್ದಾರೆ ಅವರು? 2,000 ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳೊಕೆ ಹೊರಟಿದ್ದಾರೆ? ಅವರ ಕುಟುಂಬವೇ ನುಂಗಲು ಹೊರಟಿದೆ. ಇಂಥವರು ನಮ್ಮ ಕುಟುಂಬದ ಬಗ್ಗೆ ಮತಾಡ್ತಾರೆ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆ:

ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಅವರು ಸಭೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯವನ್ನು ಮಾರಾಟ ಮಾಡಲು ಹೊರಟಿದ್ದಾರೆ ಇವರು. ಬಡ ಮಕ್ಕಳಿಗೆ ಶಿಕ್ಷಣ ಕೊಡಲು ಇವರಿಗೆ ಯೋಗ್ಯತೆ ಇಲ್ಲ. ನಮ್ಮ ರಾಜ್ಯದಲ್ಲಿಯೇ ಈಸ್ಟ್ ಇಂಡಿಯಾ ಕಂಪನಿಗಳಿವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಾ ಎಂದು ಪ್ರಶ್ನಿಸಿದರು.

ನನಗೆ ಜನ ರೆಸ್ಟ್ ಕೊಟ್ಟಿದ್ದಾರಂತೆ. ಇವರಿಗೂ ರೆಸ್ಟ್ ಕೊಡುವ ಕಾಲ ಹತ್ತಿರದಲ್ಲೇ ಇದೆ. ನನಗೆ ಬೆದರಿಕೆ ಹಾಕುವುದು ಬೇಡ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ನೀವು, ನಿಮ್ಮ ಅಣ್ಣ ಬೆದರಿಕೆ ನಮಗೆ ಹಾಕಲು ಆಗಲ್ಲ ಎಂದು ಡಿಕೆ ಸಹೋದರರ ವಿರುದ್ಧ ಹರಿಹಾಯ್ದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ 40 ಪರ್ಸೆಂಟ್ ಬಗ್ಗೆ ತನಿಖೆ ಮಾಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು; 2016-17ರಲ್ಲಿ ಜಾಬ್ ಕಾರ್ಡ್ ದು ಇದೇ ನಾಗಮೋಹನ್ ದಾಸ್ ಅವರ ಬಳಿ ತನಿಖೆ ಮಾಡಿಸಿದ್ದರು. ಅದು ಎಲ್ಲಿದೆ? ಆ ವರದಿ ಕಥೆ ಏನಾಯಿತು? ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದಲ್ಲಿ ತನಿಖೆ ಎಂದರು. ಬಹುಶಃ ಅವರು ಒಪ್ಪಿಲ್ಲ ಅಂತ ಕಾಣುತ್ತೆ. ಹಾಗಾಗಿ ಇವರಿಗೆ ವಹಿಸಿದ್ದಾರೆ ಅನಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡ ಅವರು, ನಾಗಮೋಹನ್ ದಾಸ್ ಅವರ ಕೈಲಿ ತನಿಖೆ ಮಾಡಿಸಿ, ಆ ವರದಿ ಹಾಗೆ ಇಟ್ಟುಕೊಳ್ಳುತ್ತಾರೆ ಅಷ್ಟೆ. ಅದರ ಫಲಿತಾಂಶ ಹೇಗಿರುತ್ತದೆ ಎನ್ನುವುದು ಗೊತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Related posts