ಬಿಜೆಪಿ ಶಾಸಕರಿಗೆ ಕೇಂದ್ರ ಸಚಿವರಿಂದ ಬೆದರಿಕೆ ಪ್ರಕರಣ; ನ್ಯಾಯಾಂಗ ತನಿಖೆಯೇ ಸೂಕ್ತ ಎಂದ ಕಾಂಗ್ರೆಸ್

ಬೆಂಗಳೂರು: ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಔರಾದ್‌ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಮಾಡಿರುವ ಆರೋಪ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಈ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ರಮೇಶ್‌ ಬಾಬು, ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ನನಗೆ ಜೀವ ಬೆದರಿಕೆ ಹಾಕಲಾಗಿದೆ, ನನ್ನ ಪ್ರಾಣಕ್ಕೆ ಆಪತ್ತಿದೆ ಎಂದು ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು ಗಂಬೀರವಾದ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರೇ ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ. ಚುನಾವಣೆಗೂ ಮೊದಲು ಗೂಂಡಾ ರಾಜಕಾರಣ ಮಾಡುತ್ತಿದ್ದ ಬಿಜೆಪಿ, ಚುನಾವಣೆ ಸೋತ ನಂತರವೂ ಹಳೆಯ ಚಾಳಿ ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಆರೋಪ ಮಾಡಿದರೂ ಬಿಜೆಪಿಯಲ್ಲಿ ದಲಿತ ಶಾಸಕನ ಪರ ನಿಲ್ಲಲು ಯಾರೂ ಸಿದ್ದರಿಲ್ಲ ಎಂದ ರಮೇಶ್ ಬಾಬು, ವಿಧಾನಸಭಾ ಚುನಾವಣೆಯ ಮೊದಲು ಹಾಗೂ ನಂತರವೂ ಬಿಜೆಪಿ ಅಪರಾಧಗಳಿಗೆ, ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.

ಬೀದರ್‌ ಜಿಲ್ಲಾ ಎಸ್‌ಪಿಗೆ ಭಗವಂತ ಖೂಬಾ ಅವರು ದೂರನ್ನು ಕೊಟ್ಟಿದ್ದು, ಅದರಲ್ಲಿ “ಪ್ರಭು ಚವ್ಹಾಣ್‌ ಅವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ನಾನು ಹೊಣೆಗಾರನ್ನಲ್ಲ ಎಂದ ದೂರನ್ನು ಕೊಟ್ಟಿದ್ದಾರೆ ಎಂದು ಬೊಟ್ಟು ಮಾಡಿದ ರಮೇಶ್ ಬಾಬು, ರಾಜ್ಯ ಬಿಜೆಪಿ ಘಟಕ ಖೂಬ ಅವರಿಗೆ ನೋಟಿಸ್‌ ನೀಡಬೇಕಿತ್ತು, ಸ್ಪಷ್ಟನೆ ಕೇಳಬೇಕಿತ್ತು ಅಥವಾ ಕೇಂದ್ರ ಸಂಪುಟದಿಂದ ತೆಗೆದು ಹಾಕಬೇಕಿತ್ತು, ಇದನ್ನೆಲ್ಲಾ ಮಾಡದೇ ಕ್ರಿಮಿನಲ್‌ಗಳನ್ನ ರಕ್ಷಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಬಿಜೆಪಿ ನಾಯಕರು ಸುಮ್ಮನೆ ಕುಳಿತಿದ್ದಾರೆ. ಕಾಂಗ್ರೆಸ್‌ ಪಕ್ಷವು ವಿಧಾನಸಭಾ ಸ್ಪೀಕರ್‌ ಅವರಲ್ಲಿ ಮನವಿ ಮಾಡುತ್ತಿದ್ದು, ಶಾಸಕರಾದ ಪ್ರಭು ಚವ್ಹಾಣ್‌ ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಮತ್ತು ನ್ಯಾಯಾಂಗ ತನಿಖೆಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಭಗವಂತ ಖೂಬಾ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೀದರ್‌ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ವಿಶ್ಲೇಷಿಸಿದರು.

NEP ರದ್ದು?

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಬಾಬು, NEPಯನ್ನು ರಾಜ್ಯದಲ್ಲಿ ರದ್ದುಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು ಅದರಂತೆ ನಾವು ನಮ್ಮ ಮಾತಿಗೆ ಬದ್ದರಾಗಿದ್ದೇವೆ ಎಂದರು. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ತಗೆದು ಕೇಂದ್ರ ಪಟ್ಟಿಗೆ ಸೇರಿಸಬಾರದು, ಶಿಕ್ಷಣದ ಕುರಿತು ಕಾನೂನು ತೆಗೆದುಕೊಳ್ಳುವ ಹಕ್ಕು ರಾಜ್ಯಗಳ ಬಳಿಯೇ ಇರಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣವನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನೂತನ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ರಾಜ್ಯಗಳಿಗೆ ನೀಡಲಾಗುವುದು ಎಂದು ನಿರ್ಮಲಾ ಸೀತರಾಮನ್‌ ಅವರು ಹೇಳಿದ್ದರು, ಅದನ್ನು ನಾವು ಸ್ವಾಗತಿಸುತ್ತೇವೆ ಎಂದ ಅವರು, ಶೇ 30 ರಷ್ಟು ಶಿಕ್ಷಕರ ವರ್ಗಾವಣೆಯನ್ನು ಅತ್ಯಂತ ಸುಲಲಿತವಾಗಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದಿದೆ. ಜೊತೆಗೆ 10 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

Related posts