ನವದೆಹಲಿ: 2025ರಲ್ಲಿ ದೇಶದಲ್ಲಿ ನಡೆದ ಪ್ರಮುಖ ಹಾಗೂ ಐತಿಹಾಸಿಕ ಘಟನೆಗಳನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಈ ವರ್ಷ ಭಾರತಕ್ಕೆ “ಇನ್ನಷ್ಟು ಹೆಚ್ಚಿದ ಆತ್ಮವಿಶ್ವಾಸ” ನೀಡಿದೆ ಎಂದು ಭಾನುವಾರ ಹೇಳಿದರು. ಹೊಸ ಭರವಸೆಗಳು ಹಾಗೂ ಸಂಕಲ್ಪಗಳೊಂದಿಗೆ ದೇಶವು 2026ರತ್ತ ಹೆಜ್ಜೆ ಇಡಲು ಸಜ್ಜಾಗಿದೆ ಎಂದು ಅಭಿಪ್ರಾಯಪಟ್ಟರು.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, “ಇನ್ನು ಕೆಲವೇ ದಿನಗಳಲ್ಲಿ 2026 ವರ್ಷ ನಮ್ಮ ಮನೆಬಾಗಿಲು ತಟ್ಟಲಿದೆ. ಈ ಸಂದರ್ಭದಲ್ಲಿ ಇಡೀ ವರ್ಷದ ನೆನಪುಗಳು ಮನಸ್ಸಿನಲ್ಲಿ ಓಡಾಡುತ್ತಿವೆ. ದೇಶವನ್ನು ಒಂದಾಗಿ ಕಟ್ಟಿದ ಅನೇಕ ಕ್ಷಣಗಳು, ಚರ್ಚೆಗಳು ಮತ್ತು ಸಾಧನೆಗಳು 2025ನ್ನು ಸ್ಮರಣೀಯವಾಗಿಸಿವೆ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣಗಳನ್ನು ಈ ವರ್ಷ ನೀಡಿದೆ” ಎಂದು ಹೇಳಿದರು.
ರಾಷ್ಟ್ರೀಯ ಭದ್ರತೆಯಿಂದ ಹಿಡಿದು ಕ್ರೀಡಾ ಸಾಧನೆಗಳವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ಜಾಗತಿಕ ವೇದಿಕೆಗಳವರೆಗೆ ಎಲ್ಲೆಡೆ ಭಾರತದ ಮುದ್ರೆ ಮೂಡಿದೆ ಎಂದು ಪ್ರಧಾನಿ ಹೇಳಿದರು. ಮೇ ತಿಂಗಳಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ್’ ಅನ್ನು ಉಲ್ಲೇಖಿಸಿದ ಅವರು, “ಇಂದಿನ ಭಾರತ ತನ್ನ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ. ಆ ಕಾರ್ಯಾಚರಣೆ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ” ಎಂದರು.
‘ವಂದೇ ಮಾತರಂ’ ರಾಷ್ಟ್ರೀಯ ಗೀತೆ 150 ವರ್ಷ ಪೂರೈಸಿದ ಸಂದರ್ಭದಲ್ಲಿಯೂ ದೇಶದ ಏಕಾತ್ಮತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು ಎಂದು ಅವರು ಹೇಳಿದರು. ‘ವಂದೇ ಮಾತರಂ 150’ ಅಭಿಯಾನಕ್ಕೆ ದೇಶವಾಸಿಗಳು ಉತ್ಸಾಹದಿಂದ ಸ್ಪಂದಿಸಿದ್ದನ್ನು ಅವರು ಸ್ಮರಿಸಿದರು.
ಕ್ರೀಡಾ ಕ್ಷೇತ್ರದಲ್ಲಿ 2025 ಸ್ಮರಣೀಯ ವರ್ಷವಾಗಿದ್ದು, ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದು, ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿರುವುದನ್ನು ಪ್ರಧಾನಿ ಉಲ್ಲೇಖಿಸಿದರು. ಮಹಿಳಾ ಅಂಧರ ಟಿ–20 ವಿಶ್ವಕಪ್, ಏಷ್ಯಾ ಕಪ್ ಟಿ–20 ಸೇರಿದಂತೆ ವಿವಿಧ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಪ್ಯಾರಾ-ಅಥ್ಲೀಟ್ಗಳು ಪದಕಗಳ ಮಳೆ ಸುರಿಸಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ಮತ್ತು ವಿಜ್ಞಾನ ಕ್ಷೇತ್ರದಲ್ಲಿಯೂ ಭಾರತ ಮಹತ್ವದ ಜಿಗಿತಗಳನ್ನು ಸಾಧಿಸಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಪ್ರಧಾನಿ ವಿಶೇಷವಾಗಿ ಸ್ಮರಿಸಿದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಉಪಕ್ರಮಗಳು 2025ರಲ್ಲೇ ಜಾರಿಯಾಗಿದ್ದು, ದೇಶದಲ್ಲಿ ಚಿರತೆಗಳ ಸಂಖ್ಯೆಯು 30 ದಾಟಿರುವುದನ್ನೂ ಅವರು ಗಮನಾರ್ಹ ಸಾಧನೆ ಎಂದು ಬಣ್ಣಿಸಿದರು.
“2025ರಲ್ಲಿ ನಂಬಿಕೆ, ಸಂಸ್ಕೃತಿ ಮತ್ತು ಭಾರತದ ವಿಶಿಷ್ಟ ಪರಂಪರೆ ಒಂದಾಗಿ ಕಾಣಿಸಿಕೊಂಡಿದೆ. ವರ್ಷದ ಆರಂಭದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳ ಜಗತ್ತಿನ ಗಮನ ಸೆಳೆದರೆ, ವರ್ಷದ ಕೊನೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಸಮಾರಂಭ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯನ್ನು ತಂದಿತು” ಎಂದು ಮೋದಿ ಹೇಳಿದರು.
ಸ್ವದೇಶಿ ಉತ್ಪನ್ನಗಳ ಬಳಕೆಯೂ ಹೆಚ್ಚಾಗಿದ್ದು, ಜನರು ಭಾರತೀಯರ ಪರಿಶ್ರಮದಿಂದ ತಯಾರಾದ ವಸ್ತುಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದರು.
“ಒಟ್ಟಾರೆ, 2025 ಭಾರತಕ್ಕೆ ಇನ್ನಷ್ಟು ಆತ್ಮವಿಶ್ವಾಸ ನೀಡಿದ ವರ್ಷವಾಗಿದೆ. ಆದರೆ ಈ ವರ್ಷ ಕೆಲ ಭಾಗಗಳಲ್ಲಿ ನೈಸರ್ಗಿಕ ವಿಕೋಪಗಳು ದುಃಖ ತಂದಿವೆ. ಅವುಗಳಿಂದ ಪಾಠ ಕಲಿದು, ಹೊಸ ಸಂಕಲ್ಪಗಳೊಂದಿಗೆ 2026ರತ್ತ ದೇಶ ಮುನ್ನಡೆಯಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
