2026ರಲ್ಲಿ ಆಪಲ್ ಸ್ಮಾರ್ಟ್ ಗ್ಲಾಸ್‌ಗಳು; ಮೂರನೇ ಕಣ್ಣಿನಂತೆ ಕಾರ್ಯನಿರ್ವಹಿಸಲಿವೆ!

ವಿನೂತನ ತಂತ್ರಜ್ಞಾನ ಪ್ರಪಂಚದ ದೈತ್ಯ ಸಂಸ್ಥೆ ಆಪಲ್ ಇಂಕ್ 2026ರಲ್ಲಿ ತನ್ನ ಹೊಸ ಸ್ಮಾರ್ಟ್ ಗ್ಲಾಸ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಒಳಗೊಂಡ ಈ ಗ್ಲಾಸ್‌ಗಳು ಬಳಕೆದಾರರಿಗೆ ‘ಮೂರನೇ ಕಣ್ಣು’ ರೀತಿಯಲ್ಲಿ ಕೆಲಸಮಾಡಲಿವೆ ಎನ್ನಲಾಗುತ್ತಿದೆ.

ರೇ-ಬ್ಯಾನ್ ಮೆಟಾ ಗ್ಲಾಸ್‌ಗಳಿಗೆ ನೇರ ಪೈಪೋಟಿ ನೀಡಲಿರುವ ಆಪಲ್ ಗ್ಲಾಸ್‌ಗಳು ಈಗಾಗಲೇ ಟೆಕ್‌ ಪ್ರಪಂಚದಲ್ಲಿ ಕುತೂಹಲ ಮೂಡಿಸಿವೆ. ಕಂಪನಿಯು “ವಿಷನ್ ಪ್ರೊ” ಯೋಜನೆಯ ಕೆಲ ಕೆಲಸಗಳನ್ನು ಬಿಟ್ಟು ಈ ಸ್ಮಾರ್ಟ್ ಗ್ಲಾಸ್ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಮ್ಯಾಕ್‌ರಮರ್ಸ್ ವರದಿ ತಿಳಿಸಿದೆ.

ವರದಿಯ ಪ್ರಕಾರ, ಬಳಕೆದಾರರ ಆಸಕ್ತಿ ಗಮನಿಸಿ, ಆಪಲ್ ಹಲವಾರು ಮಾದರಿಗಳ ಚೌಕಟ್ಟುಗಳು ಮತ್ತು ವಿನ್ಯಾಸಗಳಲ್ಲಿ ಗ್ಲಾಸ್‌ಗಳನ್ನು ನೀಡಲು ಯೋಜಿಸಿದೆ. ಆದರೆ ಬ್ಯಾಟರಿ, ಕ್ಯಾಮೆರಾ ಮತ್ತು ಚಿಪ್‌ಗಳ ಅಳವಡಿಕೆ ಕುರಿತು ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಆಪಲ್ ಸ್ಮಾರ್ಟ್ ಗ್ಲಾಸ್‌ಗಳು ಹೊಸತಾದ ಸಿರಿ ಆವೃತ್ತಿಯಿಂದ ಚಾಲಿತವಾಗಲಿವೆ. ಈ ಅಪ್‌ಗ್ರೇಡ್ ಸಿರಿ 2026ರ ವಸಂತ ಋತುವಿನಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಈಗಾಗಲೇ ಘೋಷಿಸಿದೆ. ಸಿರಿಯ ಸಹಾಯದಿಂದ ಬಳಕೆದಾರರು ಕನ್ನಡಕಗಳ ಮೂಲಕ ಪ್ರಶ್ನೆ ಕೇಳುವುದು, ಭಾಷೆ ಅನುವಾದಿಸುವುದು, ಸಂಗೀತ ಕೇಳುವುದು, ಸಂದೇಶ ಕಳುಹಿಸುವುದು, ವೀಡಿಯೊ ನೋಡುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ನೇರವಾಗಿ ನಿರ್ವಹಿಸಬಹುದು.

ಮೊದಲ ತಲೆಮಾರಿನ ಆಪಲ್ ಗ್ಲಾಸ್‌ಗಳಲ್ಲಿ ಪರದೆ ಇರಲಾರದೆಂಬ ಮಾಹಿತಿ ಹರಿದಾಡುತ್ತಿದೆ. ರೇ-ಬ್ಯಾನ್ ಮೆಟಾ AI ಗ್ಲಾಸ್‌ಗಳಂತೆ ಧ್ವನಿಯಾಧಾರಿತ AI ವೈಶಿಷ್ಟ್ಯಗಳನ್ನು ಒಳಗೊಂಡಿರಲಿವೆ. ದೃಶ್ಯ ಬುದ್ಧಿಮತ್ತೆಯ ಸಹಾಯದಿಂದ ಸುತ್ತಮುತ್ತಲಿನ ವಾತಾವರಣವನ್ನು ಗುರುತಿಸುವುದು, ಫೋನ್‌ಕಾಲ್ ಮಾಡುವುದು, ಸಸ್ಯ-ಪ್ರಾಣಿಗಳನ್ನು ಗುರುತಿಸುವುದು ಮತ್ತು ವೀಡಿಯೊ ರೆಕಾರ್ಡ್ ಮಾಡುವಂತಹ ವೈಶಿಷ್ಟ್ಯಗಳು ಇದರಲ್ಲಿ ಇರಲಿವೆ ಎಂಬ ವರದಿಗಳು ತಿಳಿಸುತ್ತವೆ.

ಕಸ್ಟಮ್ ಆಪಲ್ ಪ್ರೊಸೆಸರ್‌ನಿಂದ ಈ ಸಾಧನ ಚಾಲಿತವಾಗಲಿದ್ದು, ಸ್ಮೂತ್ ಕಾರ್ಯಕ್ಷಮತೆ ನೀಡಲಿದೆ. ಆದರೆ ಗ್ಲಾಸ್‌ಗಳನ್ನು ಬಳಸಲು ಐಫೋನ್ ಸಂಪರ್ಕ ಕಡ್ಡಾಯವಾಗಿರುತ್ತದೆ. ಸ್ವತಂತ್ರ ಸಾಧನವಾಗಿ ಇದು ಕಾರ್ಯನಿರ್ವಹಿಸಲಾರದು ಎಂದು ತಿಳಿದುಬಂದಿದೆ.

ಆಪಲ್ ಗ್ಲಾಸ್‌ಗಳ ಬೆಲೆ, ವಿನ್ಯಾಸ ಮತ್ತು ಬಿಡುಗಡೆಯ ನಿಖರ ದಿನಾಂಕದ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

Related posts