ಬೆಂಗಳೂರು: 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಜನವರಿ 17ರಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಈ ಬಾರಿಯ ಪ್ರಮುಖ ವಿಶೇಷತೆಯಾಗಿ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಆಧಾರ್ ಅಥವಾ ಡಿಜಿಲಾಕರ್ ಮೂಲಕ ಪ್ರಾಮಾಣೀಕರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಅರ್ಜಿ ಸಲ್ಲಿಕೆಯ ವೇಳೆ ಹೆಸರು ಹಾಗೂ ಇತರೆ ಮಾಹಿತಿಗಳಲ್ಲಾಗುತ್ತಿದ್ದ ತಪ್ಪುಗಳನ್ನು ತಪ್ಪಿಸಬಹುದಾಗಿದೆ ಎಂದು KEA ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಕಳೆದ ಮೂರು ದಶಕಗಳಿಂದ ಸಿಇಟಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ KEAಗೆ ಇದೆ ಎಂದು ಹೇಳಿದರು. ಪಿಜಿ ಹಾಗೂ ಯುಜಿ ನೀಟ್ ಕೌನ್ಸೆಲಿಂಗ್, ಪಿಜಿಸಿಇಟಿ/ಪಿಜಿಇಟಿ, ಕೆ-ಸೆಟ್, ಪಿಎಸ್ಐ ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳನ್ನೂ ಪ್ರಾಧಿಕಾರ ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು.
2025ರ ಸಿಇಟಿ ವೇಳೆ ಎದುರಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, 2026ರ ಪರೀಕ್ಷಾ ಪ್ರಕ್ರಿಯೆಗೆ ಹೊಸ ತಂತ್ರಜ್ಞಾನ ಹಾಗೂ ವ್ಯವಸ್ಥಿತ ಕ್ರಮಗಳೊಂದಿಗೆ ಸಿದ್ಧತೆ ಆರಂಭಿಸಲಾಗಿದೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಪರೀಕ್ಷಾ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಇಟಿ ಅರ್ಜಿ ಭರ್ತಿ, ಶುಲ್ಕ ವಿವರ, ಲಭ್ಯವಿರುವ ಸೀಟುಗಳು, ಅರ್ಹತಾ ಮಾನದಂಡಗಳು ಹಾಗೂ ಪರೀಕ್ಷಾ ಕೇಂದ್ರಗಳ ಕುರಿತು ಸಮಗ್ರ ಮಾಹಿತಿ ಒಳಗೊಂಡ ‘ಸಿಇಟಿ ದಿಕ್ಸೂಚಿ’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿದೆ. ಸರಳ ಭಾಷೆಯಲ್ಲಿ ಸಿದ್ಧಪಡಿಸಿದ ಈ ಕೈಪಿಡಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳ ಮೂಲಕ ವಿತರಿಸಲಾಗುವುದು.
ರಾಜ್ಯದಲ್ಲಿನ ಸರ್ಕಾರಿ ಹಾಗೂ ಮಾನ್ಯತೆ ಪಡೆದ 3,112 ವಿಜ್ಞಾನ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ 2.92 ಲಕ್ಷ ವಿದ್ಯಾರ್ಥಿಗಳ ಜತೆಗೆ, ಸಿಬಿಎಸ್ಇ ಹಾಗೂ ಐಸಿಎಸ್ಇ ಕಾಲೇಜುಗಳ 83 ಸಾವಿರ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 3.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ದಿಕ್ಸೂಚಿ ತಲುಪಿಸಲಾಗುವುದು.
ಕಳೆದ ವರ್ಷ ಕಾಲೇಜು ಹಂತದಲ್ಲೇ ದಾಖಲೆ ಪರಿಶೀಲನೆಗೆ ಅವಕಾಶ ನೀಡಿದ್ದ ಪ್ರಯೋಗ ಯಶಸ್ವಿಯಾಗಿದ್ದು, ಈ ಬಾರಿ ಕಾಲೇಜುಗಳಲ್ಲೇ ಅರ್ಜಿ ಭರ್ತಿ ಮಾಡುವುದಕ್ಕೂ ನೆರವು ನೀಡಲು KEA ಮುಂದಾಗಿದೆ. ಪಿಯು ವಿಜ್ಞಾನ ಕಾಲೇಜುಗಳ ಆಯ್ದ ಉಪನ್ಯಾಸಕರಿಗೆ ಆನ್ಲೈನ್ ತರಬೇತಿ ನೀಡಿ, ಅವರು ವಿದ್ಯಾರ್ಥಿಗಳ ಅರ್ಜಿ ಭರ್ತಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇದರಿಂದ ಅರ್ಜಿ ದೋಷಗಳು ಹಾಗೂ ಸೈಬರ್ ಸೆಂಟರ್ ಅವಲಂಬನೆ ಕಡಿಮೆಯಾಗಲಿದೆ.
ಕೋರ್ಸ್ ಹಾಗೂ ಕಾಲೇಜು ಆಯ್ಕೆ ಕುರಿತು ಮಾರ್ಗದರ್ಶನ ನೀಡುವ ‘ಸಿಇಟಿ ಮಂಥನ’ ಕಾರ್ಯಕ್ರಮವನ್ನು 2026–27ನೇ ಸಾಲಿಗೆ ಅನ್ವಯವಾಗುವಂತೆ ಇನ್ನಷ್ಟು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜುಗಳ ಮೂಲಸೌಕರ್ಯವನ್ನು ನೇರವಾಗಿ ಪರಿಶೀಲಿಸಲು ಅವಕಾಶ ದೊರೆಯಲಿದೆ.
ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಆಪ್ಷನ್ ಎಂಟ್ರಿ ವೇಳೆ ಹೆಲ್ಪ್ ಡೆಸ್ಕ್ಗಳನ್ನು ತೆರೆಯಲಾಗುವುದು. ಕಾಲೇಜುಗಳ ಕಂಪ್ಯೂಟರ್ ಲ್ಯಾಬ್ಗಳನ್ನು ಬಳಸಲು ಅವಕಾಶ ನೀಡಲಾಗುತ್ತದೆ.
KEA ಸಾಮಾಜಿಕ ಮಾಧ್ಯಮಗಳ ಮೂಲಕವೂ ಜಾಗೃತಿ ಮೂಡಿಸುತ್ತಿದ್ದು, X ಖಾತೆ (@KEA_karnataka), ‘KEA ವಿಕಸನ’ ಯೂಟ್ಯೂಬ್ ಚಾನೆಲ್ ಹಾಗೂ KEABOT ಮೂಲಕ ಅಭ್ಯರ್ಥಿಗಳು ಅಗತ್ಯ ಮಾಹಿತಿಯನ್ನು ಪಡೆಯಬಹುದು. KEABOT ಮೂಲಕ ಈಗಾಗಲೇ 18.5 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಇಟಿ ಫಲಿತಾಂಶದ ನಂತರ ಕಾಲೇಜು ಪೋರ್ಟಲ್ ಮೂಲಕ ಮೂಲಸೌಕರ್ಯ, ಶುಲ್ಕ ಹಾಗೂ ಶೈಕ್ಷಣಿಕ ವಾತಾವರಣದ ಮಾಹಿತಿ ಲಭ್ಯವಾಗಲಿದ್ದು, ಸೂಕ್ತ ಕಾಲೇಜು ಆಯ್ಕೆ ಮಾಡಲು ಇದು ನೆರವಾಗಲಿದೆ ಎಂದು KEA ತಿಳಿಸಿದೆ.
