ಮೂಡಿಗೆರೆ ಬಳಿ ಕಾಡಾನೆ ಹಾವಳಿಗೆ ಬಲಿಯಾದ ದುರ್ದೈವಿಯ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ ಕಾಡಾನೆ ಹಾವಳಿಗೆ ಬಲಿಯಾದ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.‌

ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿ, ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಕಾರ್ಮಿಕ ಮಹಿಳೆ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿ. ಮೃತ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅರಣ್ಯ ಸಚಿವರು ಜಿಲ್ಲೆಗೆ ಭೇಟಿನೀಡಿ ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳಲಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೇ ಫೆನ್ಸಿಂಗ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಲಾಗಿದೆ ಎಂದವರು ತಿಳಿಸಿದರು.

Related posts