ಮಂಗಳೂರು; ಪಾತಕ ಲೋಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಖಡಕ್ ಅಧಿಕಾರಿ ಡಿಸಿಪಿ ಗಾವಂಕರ್

ಬೆಂಗಳೂರು: ಬಂದರು ನಗರಿಯಲ್ಲಿ ಪಾತಕ ಲೋಕದ ಮಂದಿಗೆ ಅಂಕುಶ ಹಾಕಲು ಪೊಲೀಸ್ ಪಡೆ ಸಜ್ಜಾಗಿದೆ. ಮಂಗಳೂರು ಮಹಾನಗರದ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ವಿನಯ್ ಗಾವಂಕರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಎಸ್‌ಪಿ’ಯಾಗಿ ಪದೋನ್ನತಿ ಪಡೆದಿರುವ ವಿನಯ್ ಗಾವಂಕರ್ ಅವರನ್ನು ರಾಜ್ಯ ಸರ್ಕಾರ ಮಂಗಳೂರು ನಗರದ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಿತ್ತು.
ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಅವರು ರೌಡಿ ನಿಗ್ರಹ ಹಾಗೂ ಅಪರಾಧ ಪತ್ತೆ ದಳ ವಿಭಾಗದಲ್ಲಿನ ಪೊಲೀಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣರಾದರು.


ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯಿಂದ ಹಿಡಿದು ಇನ್‌ಸ್ಪೆಕ್ಟರ್, ಡಿವೈಎಸ್‌‌ಪಿ, ಎಸಿಪಿ ಸಹಿತ ವಿವಿಧ ಹುದ್ದೆಗಳನ್ನು ಕರಾವಳಿಯಲ್ಲ್ಲೇ ನಿರ್ವಹಿಸಿದ್ದ ವಿನಯ್ ಗಾವಂಕರ್, ಹಲವಾರು ವರ್ಷಗಳ ಕಾಲ ರೌಡಿ ನಿಗ್ರಹ ದಳದಲ್ಲೇ ಕರ್ತವ್ಯ ನಿರ್ವಹಿಸಿದ್ದರು. ದಶಕಗಳ ಹಿಂದಿನ ಸುರತ್ಕಲ್ ಎನ್‌ಕೌಂಟರ್ ಸಹಿತ ಕೆಲವು ಘಟನೆಗಳು ಈ ಅಧಿಕಾರಿ ಬಗ್ಗೆ ಪಾತಕ ಲೋಕದಲ್ಲಿ ತನ್ನದೇ ಆದ ಭಯ ಹುಟ್ಟಿಸಿದೆ. ಭೂಗತ ಲೋಕವನ್ನು ಆಳುತ್ತಿದ್ದ ಮುತ್ತಪ್ಪ ರೈಯನ್ನು ವಿದೇಶದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದ ಪ್ರಕ್ರಿಯೆ ನಂತರ ಇವರ ಹೆಸರು ಪೊಲೀಸ್ ಇಲಾಖೆಯಲ್ಲೂ ಹೆಗ್ಗುರುತಾಗಿದೆ.

ಈ ಹಿಂದೆ ಕರಾವಳಿಯಲ್ಲಿ ಕಾರ್ಯನಿರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಮೇಘರಿಕ್, ಸೀಮಂತ್ ಕುಮಾರ್ ಸಿಂಗ್, ದಯಾನಂದ್, ಸೌಮೆಂದು ಮುಖರ್ಜಿ ಸಹಿತ ಹಲವು ಅಧಿಕಾರಿಗಳು, ಪಾತಕ ಲೋಕದ ಕಾರಸ್ಥಾನವೆನಿಸಿದ್ದ ಕಡಲತಡಿಯಲ್ಲಿ ರೌಡಿಗಳ ಹಾವಳಿಗೆ ಅಂಕುಶ ಹಾಕಲು ವಿನಯ್ ಗಾವಂಕರ್ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಅದಾಗಲೇ ಕಾರ್ಯಾಚರಣೆಗಿಳಿಯುತ್ತಿದ್ದ ಗಾವಂಕರ್ ಸಾರಥ್ಯದ ಪೊಲೀಸ್ ಪಡೆ ಬಹುತೇಕ ರೌಡಿಗಳನ್ನು ನೇಪಥ್ಯಕ್ಕೆ ಸರಿಸಿತ್ತು.

ಪಾತಕ‌ಲೋಕಕ್ಕೆ ಎಚ್ಚರಿಕೆಯ ಸಂದೇಶ

ಮಂಗಳೂರು ಅಪರಾಧ ವಿಭಾಗದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿನಯ್ ಗಾವಂಕರ್, ಜನರು ನಿಶ್ಚಿಂತೆಯಿಂದ ಇರಬೇಕೆನ್ನುವುದು ನಮ್ಮ ಉದ್ದೇಶ. ಹಾಗಾಗಿ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪಾತಕ‌ಲೋಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಟ್ರಾಫಿಕ್ ವಿಭಾಗದ ವಿಚಾರದಲ್ಲಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಮಂಗಳೂರು ಜನ ಪ್ರಜ್ಞಾವಂತರು. ಹಾಗಾಗಿ ಜನರೇ ನಮಗೆ ಸಹಕಾರ ನೋಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ

 

Related posts