ಮಂಗಳೂರು: ಭಾರತೀಯ ಸಂಸ್ಕೃತಿ, ಪರಂಪರೆಯ ರಾಯಭಾರಿಗಳನ್ನು ರೂಪಿಸುವ ಕಲ್ಲಡ್ಕದ ಈ ಗುರುಕುಲದಲ್ಲಿ ಇದು ಅನನ್ಯ ಕಾರ್ಯಕ್ರಮ. ದೇಶದ ಭವಿಷ್ಯದ ಮೇಧಾವಿಗಳನ್ನು ರೂಪಿಸುವ ದಕ್ಷಿಣಕನ್ನಡ ಜಿಲ್ಲೆ ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆಗೆ ಇದೀಗ ಭೀಮಬಲ.
ಆರೆಸ್ಸೆಸ್ ಹಿರಿಯ ನಾಯಕ ಡಾ.ಪ್ರಭಾಕರ ಭಟ್ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಾರಾಂತ್ಯ ದಿನವಾದ ಶನಿವಾರ ಅನನ್ಯ ಕಾರ್ಯಕ್ರಮ ಗಮನಸೆಳೆಯಿತು. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸವಲತ್ತು ಕಲ್ಪಿಸುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಿತು.
ವೈಧಿಕ ಸಂಪ್ರದಾಯ ನಿತ್ಯವೂ ಪ್ರತಿಬಿಂಭಿಸುತ್ತಿರುವ ಈ ಶ್ರೀರಾಮ ಹೈಸ್ಕೂಲ್ ಪರಿಪೂರ್ಣ ಡಿಜಿಟಲೀಕರಣಕ್ಕೆ ಮುನ್ನುಡಿ ಬರೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ IFFCO ಮತ್ತು ಸದಾಸ್ಮಿತ ಫೌಂಡೇಶನ್ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.
ಸುಮಾರು 90 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಯೋಜನೆಯಿದ್ದು ಸದ್ಯದಲ್ಲೇ ಈ ಅರ್ಹ ವಿದ್ಯಾರ್ಥಿಗಳಿಗೆ ಅದನ್ನು ಪೂರೈಸಲಾಗುವುದು ಎಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು, ಈ ವಿದ್ಯಾಕೇಂದ್ರದ ಅಭಿವೃದ್ಧಿಯ ರೂವಾರಿ ಡಾ.ಪ್ರಭಾಕರ ಭಟ್ಟರ ಕೋರಿಕೆಯಂತೆ ಈಜುಕೊಳ ಹಾಗೂ ಇತರ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಡಾ.ಪ್ರಭಾಕರ್ ಭಟ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ರಾಜೇಂದ್ರಕುಮಾರ್, ಬಿಜೆಪಿ ನಾಯಕ ಅಶೋಕ್ ರೈ ಮೊದಲಾದ ಗಣ್ಯರು ಸಾಕ್ಷಿಯಾದರು.