ನ್ಯಾಯಾಲಯ ನೀಡುವ ತೀರ್ಪುಗಳು ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು: ನ್ಯಾ. ಅರಳಿ ನಾಗರಾಜ

ಹಾವೇರಿ : ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಲು ನ್ಯಾಯಾಲಯ ನೀಡುವ ತೀರ್ಪುಗಳು ಜನ ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು, ಈ ದಿಸೆಯಲ್ಲಿ ಕನ್ನಡ ಭಾಷೆಯಲ್ಲಿ ನ್ಯಾಯದಾನ ಮಾಡಿದರೆ, ನಮ್ಮಲ್ಲಿನ ಜನರಿಗೆ ನ್ಯಾಯಾಲಯದ ಮೇಲೆ ಹೆಚ್ಚು ನಂಬಿಕೆ, ವಿಶ್ವಾಸ ಬೆಳೆಯುತ್ತದೆ ಎಂದು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಅರಳಿ ನಾಗರಾಜ ಪ್ರತಿಪಾದಿಸಿದರು.

ಶನಿವಾರ 86ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನಕ-ಶರೀಫ- ಸರ್ವಜ್ಷ ಪ್ರಧಾನ ವೇದಿಕೆಯಲ್ಲಿ ನಡೆದ “ಕನ್ನಡದಲ್ಲಿ ಕಾನೂನು ಸಾಹಿತ್ಯ” ಕುರಿತ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯಾಲಯ ನೀಡುವಂತ ತೀರ್ಪುಗಳು ಇಂದಿನ ದಿನಗಳಲ್ಲಿ ಕಕ್ಷಿದಾರರಿಗೆ, ಶ್ರೀಸಾಮಾನ್ಯರಿಗೆ ಅರ್ಥವಾಗದ ಕಾರಣ, ಪ್ರಕರಣಗಳು ದೀರ್ಘಕಾಲ ನಡೆಯಲು ಬಹುಮುಖ್ಯ ಕಾರಣವಾಗಿವೆ. ನ್ಯಾಯಾಲಯದಲ್ಲಿ ಪ್ರಕರಣಗಳ ತೀರ್ಪುಗಳು ವಿಳಂಬವಾಗುತ್ತವೆ. ಆದ್ದರಿಂದ ಶ್ರೀಸಾಮಾನ್ಯರಿಗೆ ಕಥೆಗಳ ಮೂಲಕ, ನಾಟಕಗಳ ಮೂಲಕ, ಸಾಹಿತ್ಯಗಳ ಮೂಲಕ ಅವರ ಮಾತೃಭಾಷೆಯಲ್ಲಿ ತಿಳುವಳಿಕೆ ಮೂಡುಸುವುದರ ಮೂಲಕ ಸಾಮಾನ್ಯ ಕಾನೂನುಗಳ ಬಗ್ಗೆ ಅರಿವು ಮೂಡಸಬೇಕಿದೆ ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜ ಮಾತನಾಡಿ, ಕಾನೂನಾತ್ಮಕ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಹೊರಬರುವಂತೆ ಮಾಡಲು ಸರ್ಕಾರ ಕನ್ನಡ ಕಾನೂನು ಪ್ರಾಧಿಕಾರ ರಚನೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಕಾನೂನು ಪ್ರಾಧಿಕಾರ ರಚಿಸುವುದರ ಮೂಲಕ ಹೆಚ್ಚು ಸಂಶೋಧನಾತ್ಮಕ ಕನ್ನಡ ಕಾನೂನು ಪುಸ್ತಕಗಳು ರಚಿಸುವುದ ಮೂಲಕ ಯುವ ಸಾಹಿತಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಕರ್ನಾಟಕದಲ್ಲಿ ಇಂದು ಸುಮಾರು 109 ಕಾನೂನು ಕಾಲೇಜುಗಳಿದ್ದು, ಕಾನೂನಾತ್ಮಕ ಕನ್ನಡ ಪುಸ್ತಕಗಳು ದೊರಕದೇ ಇರುವುದು ದುರ್ದೈವದ ಸಂಗತಿಯಾಗಿದೆ. ಕಾನೂನು ವ್ಯಾಸಂಗಕ್ಕೆ ಹೆಚ್ಚು ಸಂಶೋಧನಾತ್ಮಕ ಪುಸ್ತಕಗಳು ದೊರಕಿಸಿಕೊಡುವುದರ ಮೂಲಕ ಕನ್ನಡ ಭಾಷಾಭಿಮಾನ ಹೆಚ್ಚಿಸುವುದಲ್ಲದೇ, ಕನ್ನಡ ಕಾನೂನಾತ್ಮಕ ಸಾಹಿತ್ಯ ಬೆಳಿಸುವುದರಲ್ಲಿ ಸಹಕಾರಿಯಾಗುತ್ತದೆ. ಇದಲ್ಲದೇ ಕಾನೂನಾತ್ಮಕ ಸಾಹಿತ್ಯ ಬರೆಯುವ ಯುವ ಸಾಹಿತಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು. ಕಾನೂನು ಕ್ಷೇತ್ರದಲ್ಲಿ ಅನೇಕ ಪ್ರಕರಣಗಳ ತೀರ್ಪುಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಶ್ರೀಸಾಮಾನ್ಯರಿಗೆ, ಕಕ್ಷಿದಾರರಿಗೆ, ಸಾಕ್ಷಿದಾರರಿಗೆ ಅರ್ಥವಾಗುತ್ತದೆ. ಇಂದು ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಸಂವಿಧಾನದ ಆಶಯಗಳು ತಿಳಿದುಕೊಳ್ಳುವಲ್ಲಿ ಶ್ರೀಸಾಮಾನ್ಯರು ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಶ್ರೀಸಾಮಾನ್ಯರಿಗೆ ಕನ್ನಡದಲ್ಲಿ ಕಾನೂನು ಅರಿವು’ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಮಾತನಾಡಿ, ನ್ಯಾಯಾಲಯಗಳು ಇರುವುದು ನ್ಯಾಯಾಧೀಶರಿಗಲ್ಲ, ನ್ಯಾಯಾಲಯ ಇರುವುದು ಶ್ರೀಸಾಮಾನ್ಯರಿಗೆ. ಆದ್ದರಿಂದ ಪ್ರತಿಯೊಬ್ಬ ಶ್ರೀಸಾಮಾನ್ಯರಿಗೂ ಸಾಮಾನ್ಯ ಕಾನೂನು ತಿಳುವಳಿಕೆ ಅಗತ್ಯವಾಗಿದೆ. ಸಾಮಾನ್ಯ ಜನರು ‘ನನಗೆ ಕಾನೂನು ಗೊತ್ತಿಲ್ಲ ಎನ್ನಬಾರದು, ಕಾನೂನು ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ. ನ್ಯಾಯಾಧೀಶರು ಕೇವಲ ಪ್ರಶಸ್ತಿಗಾಗಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡುವುದಲ್ಲ, ನ್ಯಾಯಾಧೀಶರಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ. ತಾವು ನೀಡುವ ತೀರ್ಪುಗಳು ಕನ್ನಡದಲ್ಲಿದ್ದರೆ ಶ್ರೀಸಾಮಾನ್ಯರಿಗೂ, ಕಕ್ಷಿದಾದರಿಗೂ ನ್ಯಾಯ ಒದಗಿಸಿದಂತೆ ಮತ್ತು ಕನ್ನಡ ಭಾಷಾಭಿಮಾನ ಬೆಳಿಸಿದಂತೆ. ನ್ಯಾಯಾಲಯದಲ್ಲಿ ವಾದ-ವಿವಾದಗಳು ಕನ್ನಡ ಭಾಷೆಯಲ್ಲಿ ನಡೆಯಬೇಕು ಎಂದು ಆದೇಶವಿದ್ದರೂ, ವಾಸ್ತವಿಕವಾಗಿ ಅದು ಇಂದು ಜಾರಿಗೆಯಾಗದಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

‘ಕಾನೂನು ವಿಷಯಗಳ ಕುರಿತು ಸಾಹಿತ್ಯ ರಚನೆ ಬಗ್ಗೆ ನಿವೃತ್ತ ನ್ಯಾಯಾಧೀಶ ಬಿ ಶಿವಲಿಂಗೇಗೌಡ ಮಾತನಾಡಿ, ಕಾನೂನು ಅದರದೇ ಆದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಸಾಹಿತ್ಯಕ್ಕೆ ಚೌಕಟ್ಟು, ನಿರ್ಬಂಧಗಳು ಇರುವುದಿಲ್ಲ, ಕಾನೂನು ಮತ್ತು ಸಾಹಿತ್ಯ ಬೇರೆ ಬೇರೆ ಲೋಕಗಳಾಗಿದ್ದರೂ ಜೀವನಾನುಭವದಲ್ಲಿ ಕಾನೂನಿಗೆ ಸಾಹಿತ್ಯದ ಅಗತ್ಯವಿದೆ. ಎರಡೂ ಬಳಸುವ ರೀತಿ ಬೇರೆ ಬೇರೆ ಇದ್ದರೂ ಉದ್ದೇಶ ಮಾತ್ರ ಒಂದೇ ಇರುತ್ತದೆ. ಕಾನೂನು ಶ್ರೀಸಾಮಾನ್ಯನಿಗೆ ಅರ್ಥವಾಗದ ವಿಷಯ. ಆದರೆ ಸಾಹಿತ್ಯ ಶ್ರೀಸಾಮಾನ್ಯರಿಗೆ ತಿಳಿಯುವ ವಿಷಯ. ಆದ್ದರಿಂದ ನ್ಯಾಯಾಲಯದಲ್ಲಿ ತೀರ್ಪುಗಳು, ಪ್ರಕರಣಗಳು ಅರ್ಥವಾಗಬೇಕಾದರೆ ಅವರ ಭಾಷೆ ಸಾಹಿತ್ಯಗೆ ಅನುಗುಣವಾಗಿ ತೀರ್ಪು ನೀಡಿದರೆ ಬೇಗ ಅರ್ಥವಾಗುತ್ತದೆ. ಪ್ರಾಚೀನ ಕಾಲದಿಂದಲೂ ಮಹಿಳೆಯರು, ದೀನ ದಲಿತರಿಗೆ ಅನ್ಯಾಯವಾಗುತ್ತಾ ಬಂದಿದೆ. ಸಮಾಜದಲ್ಲಿ ಅವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಮೊದಲು ನಿಲ್ಲಬೇಕು. ಕರ್ನಾಟಕದಲ್ಲಿ ಹಲವು ನ್ಯಾಯಾಧೀಶರು ಕನ್ನಡ ಭಾಷೆಯಲ್ಲಿ ತೀರ್ಪು ನೀಡುವುದರ ಮೂಲಕ ತಮ್ಮದೆ ಆದ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರಿಗೆ ಗೌರವ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ. ವಾಮಪ್ಪ ಸ್ವಾಗತಿಸಿದರು. ಎನ್. ಸುರೇಶಕುಮಾರ ನಿರೂಪಿಸಿದರು. ಶ್ರೀಮತಿ ಸುಮಾ ಚಿಮ್ಮನಚೋಡಕರ್ ನಿರ್ವಹಿಸಿದರು, ಎಸ್.ವಿ ಕುಲಕರ್ಣಿ ವಂದಿಸಿದರು.

Related posts