ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದರೇ ಜಾರಕಿಹೊಳಿ?; ಸಿಬಿಐ ತನಿಖೆಗೆ ರಮೇಶ್ ಬಾಬು ಆಗ್ರಹ.. ಹೊಸ ‘ಕೈ’ ಅಸ್ತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಸಿಡಿ ಬಾಂಬ್ ಸಿಡಿಸಲು ಸಿದ್ದರಾಗಿರುವ ಸಾಹುಕಾರ್ ವಿರುದ್ದ ಮುಗಿಬಿದ್ದಿರುವ ಕಾಂಗ್ರೆಸ್ ನಾಯಕರು, ರಮೇಶ್ ಜಾರಕಿಹೊಳಿ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ರಹಸ್ಯ ಅಸ್ತ್ರ ಪ್ರಯೋಗಿಸಿದ್ದಾರೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ,  ರಮೇಶ್ ಜಾರಕಿಹೊಳಿರವರು ಚುನಾವಣಾ ಸಮಯದಲ್ಲಿ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ ಮಾಹಿತಿ ಮುಚ್ಚಿಟ್ಟಿರುವ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ 31-10-2022ರಲ್ಲಿ ದೂರು ಸಲ್ಲಿಸಿದೆ. ರಮೇಶ್ ಜಾರಕಿಹೊಳಿರವರು ಅನೇಕ ಬೇನಾಮಿ ಸಂಸ್ಥೆಗಳೊಂದಿಗೆ ತಮ್ಮ ವಹಿವಾಟನ್ನು ಇಟ್ಟುಕೊಂಡಿದ್ದು, ಸರ್ಕಾರ ಇದರ ತನಿಖೆಯನ್ನು ಸಿಬಿಐ ಮತ್ತು ಇಡಿಗೆ ನೀಡಬೇಕೆಂದು ಒತ್ತಾಯಿಸಿದರು.

  1. Soubhagya Laxmi Sugars Limited (Incorporated on 31-12-2008)

  2. Soubhagya Laxmi Energy Infra Pvt Ltd., (Incorporated on 16-04-2010)

  3. Soubhagya Laxmi Sponge Iron and Steels Ltd., (Incorporated on 10-6-2011)

  4. Shree Maha Laxmi Agri & Bio Pvt Ltd., (Incorporated on 06-4-2010)

  5. Sanjivini Welfare Foundation (Incorporated on 20-12-2004)

  6. Gokak Steels Ltd., (Incorporated 26-06-2005)

  7. J & G Mines-Minerals Exports Pvt Ltd., (Incorporated on 02-12-2005)

ಈ ಕಂಪನಿಗಳು ರಮೇಶ್ ಜಾರಕಿಹೊಳಿ ಅವರು ನೀಡಿರುವ ಅಧಿಕೃತ ವಿಳಾಸದಲ್ಲೇ ನೋಂದಣಿಯಾಗಿವೆ. ನೀವು ರಾಜ್ಯದ ಹಿತ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಈ ಕಂಪನಿಗಳ ಜತೆ ನಿಮ್ಮ ಸಂಬಂಧದ ಬಗ್ಗೆ ಮಾಹಿತಿ ನೀಡಿ. ಅಥವಾ ನೀವೇ ದಯಮಾಡಿ ಈ ಪ್ರಕರಣಗಳನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ. ನೀವು ನೀಡದಿದ್ದರೆ ಬಿಜೆಪಿ ಸರ್ಕಾರ ಸಿಬಿಐಗೆ ನೀಡಲಿ ಎಂದು ಎಂದು ರಮೇಶ್ ಬಾಬು ಹೇಳಿದರು.

ಕರ್ನಾಟಕದಲ್ಲಿ ಅಕ್ರಮದ ಮೂಲಕ ಸರ್ಕಾರ ರಚಿಸಿದ ಭಾರತೀಯ ಜನತಾ ಪಕ್ಷ ಅಂದಿನಿಂದಲೂ ಇಲ್ಲಿಯವರೆಗೆ ಸೆಕ್ಸ್ ಸಿಡಿಗಳ ಸದ್ದು ಮಾಡುತ್ತಿದೆ. ಅವರದೇ ಪಕ್ಷದ ಶಾಸಕರು ಈ ಸರ್ಕಾರ ಸಿಡಿ ಆಧಾರದ ಮೇಲೆ ರಚನೆಯಾಗಿದ್ದು, ಅನೇಕರು ಸೆಕ್ಸ್ ಸಿಡಿಗಳನ್ನು ಬಳಸಿಕೊಂಡು ಸಚಿವರಾಗಿದ್ದಾರೆ ಎಂದು ನೇರ ಆರೋಪ ಮಾಡಿರುತ್ತಾರೆ. ಯಡಿಯೂರಪ್ಪನವರು ಜನವರಿ 2021ರಲ್ಲಿ ತಮ್ಮ ಮಂತ್ರಿ ಮಂಡಲ ವಿಸ್ತರಣೆ ಮಾಡಿದಾಗ ಇಂತಹ ಗುರುತರ ಆರೋಪ ಬಂದಿದ್ದು, ಆ ಸಂದರ್ಭದಲ್ಲಿ ಸದರಿ ಆರೋಪಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಒತ್ತಾಯ ಮಾಡಿದ್ದರು. ರಮೇಶ್ ಜಾರಕಿಹೊಳಿರವರು ವೈಯಕ್ತಿಕ ದ್ವೇಷ ಮತ್ತು ಹತಾಶೆಯ ಕಾರಣಕ್ಕಾಗಿ ನಮ್ಮ ಪಕ್ಷದ ಅಧ್ಯಕ್ಷರ ಮೇಲೆ ಸಂಚಿನ ಭಾಗವಾಗಿ ಆರೋಪ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷವು ತನ್ನ ಲಾಭಕ್ಕಾಗಿ ಇವರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಇವರ ಸಂಚಿನಲ್ಲಿ ಭಾಗಿಯಾಗಿರುವ ಕೇಂದ್ರ ಗೃಹ ಸಚಿವರು ಮತ್ತು ಬಿಜೆಪಿ ವ್ಯವಸ್ಥಿತವಾಗಿ ಸೆಕ್ಸ್ ಸಿಡಿ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಅತ್ಯಂತ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ರಮೇಶ್ ಬಾಬು ದೂರಿದರು. ಬಿಜೆಪಿ ಈ ಸಿಡಿಗಳ ವಿಚಾರವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಸಿ ರಾಜು, ‘ಕಳೆದ ಒಂದೂವರೆ ವರ್|ಗಳಿಂದ ರಮೇಶ್ ಜಾರಕಿಹೊಳಿ ಅವರು ಏನು ಮಾಡುತ್ತಿದ್ದರು? ಇಲ್ಲಿಯವರೆಗೂ ಈ ವಿಚಾರವಾಗಿ ಮಾತನಾಡದ ಅವರು ಈಗ ಯಾಕೆ ಮಾತನಾಡುತ್ತಿದ್ದಾರೆ. ಸಿಡಿ ಬಿಡುಗಡೆಯಾದಾಗ, ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಒಟ್ಟಾಗಿ ಹೋರಾಟ ಮಾಡಿದ್ದರು ಆದರೂ ಕೇವಲ ಶಿವಕುಮಾರ್ ಅವರ ಮೇಲೆ ಮಾತ್ರ ದಾಳಿ ಮಾಡುತ್ತಿರುವುದೇಕೆ? ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಶಾಸಕಿ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಅವರು ಜನನಾಯಕರಾಗಲು ಲಾಯಕ್ಕಿಲ್ಲ. ಮೊದಲು ತಮ್ಮ ಮಾತನ್ನು ಸರಿಯಾಗಿ ಆಗಲಿ. ಸಿಡಿ ಮಹಿಳೆ ಹಾಗೂ ತಂಡವನ್ನು ಒಳಗೆ ಹಾಕಬೇಕು ಎನ್ನುವ ವ್ಯಕ್ತಿ, ಎಸ್ಐಟಿ ಮುಂದೆ ನಾವು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಪರ್ಕ ಹೊಂದಿದ್ದೆವು ಎಂದು ಹೇಳಿದ್ದರು. ಈ ಪ್ರಕರಣದ ವಿಚಾರಣೆ ಮುಗಿದಿಲ್ಲ. ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ರಮೇಶ್ ಜಾರಕಿಹೊಳಿ ಅವರ ಮೂಲಕ ಆರೋಪ ಮಾಡಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಸಂಪಾದನೆ ಬಗ್ಗೆ ಮಾತನಾಡುವ ಅವರು, ರೈತರು ಹಣ ಇಡುವ ಅಪೆಕ್ಸ್ ಬ್ಯಾಂಕ್ ನಲ್ಲಿ ಸಾಲ ಪಡೆದು ಅದನ್ನು ತೀರಿಸದೇ ಮೋಸ ಮಾಡುತ್ತಿರುವುದು ಸರಿಯೇ? ಶಿವಕುಮಾರ್ ಅವರು ಸರಿಯಾದ ರೀತಿಯಲ್ಲಿ ವ್ಯಾವಹಾರ ಮಾಡಿ ಹಣ ಸಂಪಾದಿಸಿದ್ದಾರೆ. ನೀವು ಯಾವ ರೀತಿ ಹಣ ಮಾಡಿದ್ದೀರಿ? ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಂಡು ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡುವುದನ್ನು ಕಲಿಯಲಿ. ಬಿಜೆಪಿ ಮಹಿಳಾ ನಾಯಕರು ನಿಮ್ಮ ಮಾತನ್ನು ಒಪ್ಪುತ್ತಾರಾ? ಸಿಡಿ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಒದಗಿಸಲು ಕೇವಲ ಡಿ.ಕೆ. ಶಿವಕುಮಾರ್ ಅವರು ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೋರಾಟ ಮಾಡಿದ್ದಾರೆ. ಕೇವಲ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ವೈಯಕ್ತಿಕ ದ್ವೇಷ ರಾಜಕಾರಣದಲ್ಲಿ ತರುವುದು ಬೇಡ’ ಎಂದು ತಿಳಿಸಿದರು.

Related posts