ರಾಜ್ಯದಲ್ಲಿ ಬರೋಬ್ಬರಿ 10,000 ಕೋಟಿ ರೂ ಟೋಲ್ ಸಂಗ್ರಹ.. ಆದರೆ ರಾಜ್ಯಕ್ಕೆ ಅನುದಾನ ಅಲ್ಪ..!

ಬೆಂಗಳೂರು:  ಕಳೆದ ಐದು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಹತ್ತಿರತ್ತಿರ 10,000 ಕೋಟಿ ರೂಪಾಯಿಗಳ ಟೋಲ್ ಶುಲ್ಕವನ್ನು ಕರ್ನಾಟಕ ರಾಜ್ಯವೊಂದರಲ್ಲೇ ಸಂಗ್ರಹಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಟೋಲ್ ಶುಲ್ಕ ಸಂಗ್ರಹದಲ್ಲೂ ನಮ್ಮ ರಾಜ್ಯ ಗಣನೀಯ ಸಾಧನೆ ಮಾಡಿದೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಜಾತ್ಯತೀತ ಜನತಾ ದಳ, ಆದಾಯ ಮತ್ತು ಕಾರ್ಪೊರೇಟ್ ತೆರಿಗೆ, ಜಿಎಸ್‌ಟಿ, ಟೋಲ್ ಶುಲ್ಕ ಸಂಗ್ರಹದ ಮೂಲಕ ನಮ್ಮ ಕನ್ನಡಿಗರು ಕೇಂದ್ರದ ಖಜಾನೆ ತುಂಬಿಸುತ್ತಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ನಮ್ಮ ರಾಜ್ಯಕ್ಕೆ ಅನುದಾನ ಹಂಚಿಕೆಯಾಗುವುದಿಲ್ಲ. ಬರಬೇಕಾದ ಬಾಕಿ ಜಿಎಸ್‌ಟಿ ಸಾವಿರಾರು ಕೋಟಿಗಳ ಲೆಕ್ಕದಲ್ಲಿದೆ. ಹಣ‌ ಸಂಗ್ರಹಿಸಲು ಮಾತ್ರ ನಮ್ಮ ರಾಜ್ಯ ಲೆಕ್ಕಕ್ಕಿದೆ ಎಂದಿದೆ.

ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಸರಾಗವಾಗಿ ಮುಂದುವರಿಯುತ್ತಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಮಾತ್ರ ಕರ್ನಾಟಕವು ಸೇರಿ ದಕ್ಷಿಣದ ರಾಜ್ಯಗಳಿಗೆ ಒಕ್ಕೂಟ ಸರ್ಕಾರವು ಮರಾಮೋಸವೆಸಗುತ್ತಿದೆ. ಇದರಿಂದಾಗಿ ನಮ್ಮ ರಾಜ್ಯದ ಅನೇಕ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಸೋಲುತ್ತಿವೆ ಎಂದು ಬೊಟ್ಟು ಮಾಡಿದೆ.

ಇಂತಹ ಮಲತಾಯಿ ಧೋರಣೆ ಮುಂದುವರಿಸುತ್ತಾ ಹೋದಂತೆ, ದಕ್ಷಿಣದ ರಾಜ್ಯಗಳು ಮತ್ತು ಉತ್ತರದ ರಾಜ್ಯಗಳ ಮಧ್ಯೆ ಕಂದಕ ದೊಡ್ಡದಾಗುತ್ತ ಹೋಗುತ್ತದೆ. ಇಡೀ ಭಾರತದ ಪ್ರದೇಶಗಳ ನಡುವೆ ಸಮನ್ವಯ ಸಾಧಿಸಬೇಕಿರುವುದು ಒಕ್ಕೂಟ ಸರ್ಕಾರ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ತಂತ್ರವು ತಿರುಗುಬಾಣವಾಗಲಿದೆ ಎಂದು ಜೆಡಿಎಸ್ ವಿಶ್ಲೇಷಿಸಿದೆ.

Related posts