ಮಂಗಳೂರು: ಕರಾವಳಿಯ ಬಿಜೆಪಿ ಭದ್ರಕೋಟೆಯ ನಡುವೆ ಕಾಂಗ್ರೆಸ್ ಅಧಿಪತ್ಯದ ಏಕೈಕ ‘ಮಂಗಳೂರು’ ಇದೀಗ ಮತ್ತೆ ಕೈ ವಶವಾಗಿದೆ.
ಕಮಲ-ಕೈ ಕಾಳಗದಿಂದಾಗಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದ ಈ ಖೇತ್ರದ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳುವುದು ಖಚಿತವೇ ಎಂಬ ಲೆಕ್ಕಾಚಾರ ಸಾಗಿತ್ತು. ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಯು,ಟಿ.ಖಾದರ್ ಜಯಭೇರಿ ಭಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ವಿರುದ್ಧ ಯು.ಟಿ. ಖಾದರ್ ಗೆ 18,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರವಾಗಿದ್ದರೂ ಇದು ಈಗಿನ್ನೂ ‘ಉಳ್ಳಾಲ’ ಎಂದೇ ಗುರುತಾಗಿದೆ. ಕಾಂಗ್ರೆಸ್ ಹುರಿಯಾಳು ಯು.ಟಿ.ಖಾದರ್ ಅವರು ಪುನರಾಯ್ಕೆ ಬಯಸಿ ಅಖಾಡಕ್ಕಿಳಿದಿದ್ದರೆ, ಬಿಜೆಪಿಯಿಂದ ಸತೀಶ್ ಕುಂಪಲ ಅವರು ಪ್ರಬಲ ಪೈಪೋಟಿ ಒಡ್ಡಿದ್ದರು. ಈ ಕ್ಷೇತ್ರವು ಮುಸ್ಲಿಂ ಮತದಾರರ ಪ್ರಾಬಲ್ಯದ ಕ್ಷೇತ್ರವಾಗಿದ್ದರೂ SDPI ಒಡ್ಡಿರುವ ಪ್ರಬಲ ಸವಾಲು ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿತ್ತು. ಬಹುಪಾಲು ಮುಸ್ಲಿಂ ಮತಗಳನ್ನು SDPI ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಅವರು ಕಬಲಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ಆಗಿತ್ತು. ಈ ಸಂಧಿಕಾಲದಲ್ಲಿ ಅಲ್ಪಸಂಖ್ಯಾತರ ಮತಗಳು ಚದುರಿ ಹೋಗುವುದನ್ನು ತಡೆಯಲು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಭಾರೀ ಕಸರತ್ತು ನಡೆಸಿದ್ದರು.