ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣ ಕುರಿತಂತೆ ಬಿಜೆಪಿ ನಾಯಕ ಸಚಿವ ಆರಗ ಜ್ಞಾನೇಂದ್ರ ಅವರು ಮಾಜಿ ಟೀಕಿಸಿದ್ದಾರೆಂಬ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿಯೂ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಕಟ್ಟಿಹಾಕುವ ತಯಾರಿಯಲ್ಲಿರುವ ಕಾಂಗ್ರೆಸ್ ಇದೀಗ ಖರ್ಗೆ ಬಗೆಗಿನ ಹೇಳಿಕೆಯನ್ನು ಮುಂದಿಟ್ಟು ಕಮಲ ನಾಯಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು, ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾಜದಲ್ಲಿ ಜಾತಿ ಪದ್ಧತಿ ಇರಬೇಕು ಎಂಬ ಮನಸ್ಥಿತಿ ಬಿಜೆಪಿಯವರದ್ದಾಗಿದೆ. ಹೀಗಾಗಿ ಅವರು ಆಗಾಗ ತಮ್ಮ ಹಿಡನ್ ಅಜೆಂಡಾ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ಪ್ರತಿಪಾದಿಸುತ್ತದೆ. ಇವರು ಇಂದು ನಮ್ಮ ಪಕ್ಷದ ಇಬ್ಬರು ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಅನೇಕ ಬಾರಿ ಇಂತಹ ಮಾತುಗಳನ್ನು ಅನಂತಕುಮಾರ್ ಹೆಗಡೆ ಅವರು ಆಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದಾರೆ. ಇದು ಸಂಘ ಪರಿವಾರ ಹಾಗೂ ಬಿಜೆಪಿ ಹೇಳಿಕೆ ಕೇವಲ ಅರಗ ಜ್ಞಾನೇಂದ್ರ ಅವರ ಹೇಳಿಕೆಯಲ್ಲ ಎಂದು ವಿಶ್ಲೇಷಿಸಿದ ರಮೇಶ್ ಬಾಬು, ತೀರ್ಥಹಳ್ಳಿಯಂತಹ ನಾಡಿನಲ್ಲಿ ಇಂತಹ ಅರೆ ಜ್ಞಾನವಂತರು ಬಂದಿರುವುದು ದುರಂತ. ಸಜ್ಜನ ರಾಜಕಾರಣಕ್ಕೆ ಹೆಸರಾದ ಶಾಂತವೇರಿ ಗೋಪಾಲಗೌಡರು, ಡಿ.ಬಿ ಚಂದ್ರೇಗೌಡರು, ಕಿಮ್ಮನೆ ರತ್ನಾಕರ, ಕೊಣಂದೂರು ಲಿಂಗಪ್ಪನವರು ಈ ಕ್ಷೇತ್ರದ ಶಾಸಕರಾಗಿದ್ದರು. ಇಂತಹ ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟ ತೀರ್ಥಹಳ್ಳಿ ಕ್ಷೇತ್ರದಿಂದ ಅರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದು ದುರ್ದೈವ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ, ಅವರ ವಿರುದ್ಧ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಬಾರಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾಷಣ ಮಾಡುತ್ತಾ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರಿಗೆ ಪಾಠ ಕಲಿಸಿದ್ದೇವೆ, ಈಗ ಮರಿ ಖರ್ಗೆ ಅವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದ್ದರು. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ತಪ್ಪುಗಳನ್ನು ಅನಾವರಣ ಮಾಡಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ವಿಚಲಿತರಾದ ಸಂಘ ಪರಿವಾರದ ನಾಯಕರು ಖರ್ಗೆ ಅವರ ಮೇಲೆ ಹಗೆತನದಿಂದ ವೈಯಕ್ತಿಕ ಟೀಕೆ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.
ಅರಗ ಕ್ಷಮೆಗೂ ಅರ್ಹರಲ್ಲದ ವ್ಯಕ್ತಿ..!
ಅವರು ಕ್ಷಮೆ ಕೇಳುವಂತೆ ನಾನು ಆಗ್ರಹಿಸುವುದಿಲ್ಲ. ಅರಗ ಜ್ಞಾನೇಂದ್ರ ಕ್ಷಮೆಗೂ ಅರ್ಹರಲ್ಲದ ವ್ಯಕ್ತಿ. ಇಂತಹ ಅವಕಾಶವಾದಿ ನಾಯಕರಿಗೆ ಜನ ಉತ್ತರ ನೀಡುತ್ತಾರೆ ಎಂದು ಭಾವಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಜನ ಉತ್ತರ ನೀಡಿದ್ದು, ಲೋಕಸಭೆಯಲ್ಲೂ ಪ್ರಬುಧ್ಧ ಮತದಾರರು ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.
Live with OneStream Live. https://t.co/2NParmSIYz
— Karnataka Congress (@INCKarnataka) August 2, 2023
ಚುನಾವಣೆ ಮುಗಿದು ಎರಡೂವರೆ ತಿಂಗಳಾಗಿದೆ. ಆದರೂ ಬಿಜೆಪಿಗೆ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಇದು ಬಿಜೆಪಿ ಯಾವ ಸ್ಥಿತಿಗೆ ಬಂದು ತಲುಪಿದೆ ಎಂಬುದಕ್ಕೆ ಸಾಕ್ಷಿ. ವಿರೋಧ ಪಕ್ಷ ನಾಯಕನಿಲ್ಲದೆ ಅಧಿವೇಶನ ಮಾಡಿದ ಅಪಕೀರ್ತಿಗೆ ಬಿಜೆಪಿ ಒಳಗಾಗಿದೆ ಎಂದು ಕಮಲಾ ಪಕ್ಷದ ನಾಯಕರ ನಡೆ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿದ ಅವರು, ಸಿ.ಟಿ. ರವಿ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಇದ್ದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ. ಇವರು ಚಿಕ್ಕಮಗಳೂರು ಉಸ್ತುವಾರಿ ನಿಭಾಯಿಸಲು ಆಗುವುದಿಲ್ಲ ಎಂದು ಅರಿತಿದ್ದಾರೆ. ಅವರ ಸಾಧನೆ, ಕೊಡುಗೆ ಏನೂ ಇಲ್ಲ ಎಂದು ಆ ಪಕ್ಷದವರಿಗೆ ಅರ್ಥವಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಅಂಗಲಾಚುವ ಪರಿಸ್ಥಿತಿ ಸಿ.ಟಿ ರವಿ ಅವರಿಗೆ ಎದುರಾಗಿದೆ ಎಂದು ವ್ಯಂಗ್ಯವಾಡಿದರು.
ಒಂದೆಡೆ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸಿದರೆ, ಮತ್ತೊಂದೆಡೆ ಸಿ.ಟಿ ರವಿ ಅವರು ಅಂಗಲಾಚುತ್ತಿದ್ದಾರೆ. ಮತ್ತೊಂದೆಡೆ ಶೋಭ ಕರಂದ್ಲಾಜೆ ಅವರು ಹೋರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯತ್ನಾಳ್ ಅವರಿಂದ ಒಂದು ಡಜನ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಅರವಿಂದ ಬೆಲ್ಲದ್ ಎಂಬುವವರ ಹೆಸರು ಕೇಳಿ ಬಂದಿತ್ತು. ಅವರು ಎಲ್ಲಿ ಕಳೆದುಹೋಗಿದ್ದಾರೋ ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನೈತಿಕವಾಗಿ ಅಧಃಪತನ ಕಂಡಿದೆ ಎಂದು ಬಿಜೆಪಿ ನಾಯಕರ ಅಸಹಾಯತೆ ಬಗ್ಗೆ ಬೊಟ್ಟು ಮಾಡಿದ ರಮೇಶ್ ಬಾಬು, ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದವರು ಚುನಾವಣೆ ನಂತರ ಬಿಜೆಪಿ ನಾಯಕರು ಕಂಗೆಟ್ಟಿದ್ದು, ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಬೊಮ್ಮಾಯಿ ಅವರು ತಾನು ಬಿಜೆಪಿಯಲ್ಲಿರಲು ಸಾಧ್ಯವಿಲ್ಲ ಎಂದು ಖಾಸಗಿಯಾಗಿ ಹೇಳಿಕೊಂಡಿದ್ದಾರೆ. ಬರುವ ದಿನಗಳಲ್ಲಿ ಅವರು ಖಾಸಗಿಯಾಗಿ ಯಾರ ಬಳಿ ಹೇಳಿಕೊಂಡಿದ್ದಾರೆ ಎಂಬ ವಿಚಾರ ಹೇಳುವುದಾಗಿ ತಿಳಿಸಿದರು.