ಚಾಮರಾಜನಗರ: ಸೈನಿಕರು , ಪೊಲೀಸರಂತೆ ಅರಣ್ಯ ಇಲಾಖೆ ಸಿಬ್ಬಂದಿಯೂ ಸಹ ಹಗಲಿರುಳಿನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ , ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿ ಎಫ್ ಒ ಡಾ. ಸಂತೋಷ್ ಕುಮಾರ್ ಹೇಳಿದ್ದಾರೆ.
ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗ ವ್ಯಾಪ್ತಿಯ ಗೋಪಿನಾಥಂ ವಲಯದ ಯರಕೆ ಹಳ್ಳ ಸಮೀಪದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಸಂಬಂಧಪಟ್ಟಿದಲ್ಲ ದೇಶದ ಪ್ರತಿಯೊಬ್ಬರ ಆಸ್ತಿ, ಇದನ್ನು ಪ್ರತಿಯೊಬ್ಬರು ಕಾಪಾಡುವುದು ತಮ್ಮ ಕರ್ತವ್ಯ. ನಮ್ಮ ದೇಶ ಹುಲಿಗಳ ಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯ ಎರಡನೇ ಸ್ಥಾನ ಪಡೆದಿದೆ. ಆನೆ ಗಣತಿಯಲ್ಲಿಯೂ ನಮ್ಮ ಜಿಲ್ಲೆಯ ಮುಂದಿದೆ. ನಂಬರ್ ಒನ್ ಸ್ಥಾನ ಕೇವಲ ಇಲಾಖೆಗೆ ಮಾತ್ರವಲ್ಲ ದೇಶದ ಜನರ ಆಸ್ತಿ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ದೇಶಾದ್ಯಂತ ಕರೋನ ವ್ಯಾಪಿಸಿ ಲಾಕ್ ಡೌನ್ ಮಾಡಲಾಗಿತ್ತು ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂತಹ ಪರಿಸ್ಥಿತಿಯಲ್ಲಿಯು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎಷ್ಟು ಸಮಸ್ಯೆ ಆಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಪ್ರತಿಯೊಬ್ಬರಿಗೂ ಉತ್ತಮವಾದ ಆಕ್ಸಿಜನ್ ದೊರಕಲಿದೆ. ಅರಣ್ಯ ಸಂಪತ್ತನ್ನು ರಕ್ಷಿಸಿದರೆ ಉತ್ತಮ ಮಳೆಯು ಸಹ ಆಗಲಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅರಣ್ಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಕಾವೇರಿ ವನ್ಯಜೀವಿ ವಿಭಾಗದ ಎಸಿಎಫ್ ಅಂಕರಾಜು ಮಾತನಾಡಿ ಕಾಡುಗಳ್ಳ ನರಹಂತಕ ವೀರಪ್ಪನ್ ನಿಂದ 1990 ನವೆಂಬರ್ 10 ರಂದು ಕೀರ್ತಿ ಚಕ್ರ ದಿವಂಗತ ಪಿ.ಶ್ರೀನಿವಾಸ್ ರವರ ಹತ್ಯೆಯಾದ ಹಿನ್ನೆಲೆ 1992ರಿಂದ ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆಯನ್ನು 2012ರವರಗೆ ಆಚರಣೆ ಮಾಡಲಾಗುತ್ತಿತ್ತು. ನಂತರ ಭಾರತ ಸರ್ಕಾರ, ಪರಿಸರ ಮತ್ತು ಅರಣ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನಾಗಿ ಘೋಷಣೆ ಮಾಡಿದ ಹಿನ್ನೆಲೆ ಸೆಪ್ಟೆಂಬರ್ 11ರಂದು ಆಚರಣೆ ಮಾಡುತಿದ್ದೇವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯ ಸಂಪತ್ತು ವನ್ಯಜೀವಿ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನದ ಸ್ಮರಣೆಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಕಳೆದ ಒಂದು ತಿಂಗಳಲ್ಲಿ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವನ್ಯ ಪ್ರಾಣಿಗಳು ನಾಡಿಗೆ ಬಾರದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ .ಆದರೆ ಕೆಲವು ಸಂದರ್ಭಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಹಲವರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ವನ್ಯ ಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಯಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಸಿ ಸುರೇಂದ್ರ, ಎ ಸಿ ಎಫ್ ಗಳಾದ ಅಂಕರಾಜು, ನಂದಗೋಪಾಲ್, ನಿವೃತ್ತ ಡಿಎಫ್ ಓ ಉದಯ್ ಕುಮಾರ್ ನಿವೃತ್ತ ಎಸಿಎಫ್ ವಾಸುದೇವ್, ತಮಿಳುನಾಡು ಚನ್ನಂಪಟ್ಟಿ ವಲಯ ಡಿ ಆರ್ ಎಫ್ ಅರುಣ್ ಕುಮಾರ್, ಗೋಪಿನಾಥ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೆಲ್ವಿ ಉಪಾಧ್ಯಕ್ಷ ಮೈನಾ ಬಾಯಿ, ಪುದುರು ಇಡಿಸಿ ಅಧ್ಯಕ್ಷ ಕೃಷ್ಣ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಭಾಗದ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.