ಹನೂರು: ಮುಖ್ಯಮಂತ್ರಿಯಾದ ನಂತರ ಮೊಟ್ಟಮೊದಲ ಬಾರಿಗೆ ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯರವರನ್ನು ಅದ್ದೂರಿಯಾಗಿ ಸ್ವಾಗತಕೋರಿ ಬರಮಾಡಿಕೊಳ್ಳಬೇಕೆಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಸ್ತೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಸೆಪ್ಟೆಂಬರ್ 26ರಂದು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮದುವನಹಳ್ಳಿ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ ಆಯಾಯ ಗ್ರಾಮದ ಮುಖಂಡರುಗಳು ಕೆಪಿಸಿಸಿ ಕಚೇರಿಯ ಮಾರ್ಗದರ್ಶನದಲ್ಲಿ ಶಿಷ್ಟಾಚಾರದಂತೆ ಫ್ಲೆಕ್ಸ್ ಅಳವಡಿಸಿ ಅದ್ದೂರಿ ಸ್ವಾಗತ ಕೋರಬೇಕು ಎಂದು ತಿಳಿಸಿದರು. ನಿಗಮ ಮಂಡಳಿ ಸದಸ್ಯರುಗಳು, ಆಶ್ರಯ, ಆರಾಧನಾ, ಅಕ್ರಮ ಸಕ್ರಮ, ಸ್ಥಳೀಯ ನಗರ ಸಂಸ್ಥೆಗಳಿಗೆ ಹನೂರು ವಿಧಾನಸಭಾ ಕ್ಷೇತ್ರದ ಹೆಚ್ಚಿನ ಕಾರ್ಯಕರ್ತರಿಗೆ ಅಧಿಕಾರ ನೀಡಿದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಜಿ ಪಂ ಮಾಜಿ ಸದಸ್ಯ ಬಸವರಾಜು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳೋಣ, ಅದರಂತೆ ಪಕ್ಷಕ್ಕೆ ಸತತ ೬೦ ವರ್ಷಗಳಿಂದ ನಿಷ್ಠಾವಂತರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿ ಸತತ ಮೂರು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದರು. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಹಣಬಲದಿಂದ ನಾವು ಸೋಲನ್ನು ಅನುಭವಿಸಿದ್ದೇವೆ. ನಮ್ಮ ನಾಯಕರಾದ ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ನಮ್ಮ ಕ್ಷೇತ್ರಕ್ಕೆ ಬಲ ತುಂಬಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ್, ಮುಕುಂದವರ್ಮ, ಪಪಂ ಸದಸ್ಯ ಗಿರೀಶ್, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ಮುಖಂಡರಾದ ಚಿಕ್ಕ ತಮ್ಮಯ್ಯ, ಪಿಜಿ ಮಣಿ, ಜವಾದ್ ಅಹಮದ್, ಪಾಳ್ಯಕೃಷ್ಣ ಮಂಗಲ ಪುಟ್ಟರಾಜು , ಸಿದ್ದರಾಜು, ಶರತ್ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.