ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ವಿಫಲವಾಗಿರುವ ಜೆಡಿಎಸ್, ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ನಿರ್ಧರಿಸಿದ್ದು, ಈ ಸಂಬಂಧ ಎನ್ಡಿಎ ಸೇರ್ಪಡೆ ಪ್ರಕ್ರಿಯೆ ಆರಂಭವಾಗಿದ್ದೇ ತಡ, ಜೆಡಿಎಸ್ ನಾಯಕರಲ್ಲಿ ಮುನಿಸು ಕಾಣಿಸಿಕೊಂಡಿದೆ.
ಬಿಜೆಪಿ ನೇತೃತ್ವದ ಮಿತ್ರಪಕ್ಷವಾಗಿ ಗುರುತಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ನಿರ್ಧಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರೇ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷದೊಳಗಿನ ವಿದ್ಯಮಾನಗಳನ್ನು ಬಹಿರಂಗ ಪಡಿಸಿದ ಸಿಎಂ ಇಬ್ರಾಹಿಂ, ಪಕ್ಷದ ಈ ಮೈತ್ರಿ ನಿರ್ಧಾರಕ್ಕೆ ಜೆಡಿಎಸ್ ಪಕ್ಷದ 19 ಶಾಸಕರ ಪೈಕಿ 11 ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
‘ಅನೇಕ ಶಾಸಕರು ನನ್ನೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 20 ರಷ್ಟು ಮುಸ್ಲಿಮರು ಜೆಡಿಎಸ್ಗೆ ಮತ ಹಾಕಿದ್ದಾರೆ, ಇಲ್ಲದಿದ್ದರೆ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಗೆಲ್ಲುತ್ತಿತ್ತು. ಇದೀಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಬಳಿ ಚಿಹ್ನೆ ಇರಲಿದೆ ಎಂದು ವಿಶ್ಲೇಷಿಸಿದರು.