ವಿಶೇಷ ವರದಿ: ಸುರೇಶ ಬಾಬು
ನಾಯಕ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಈ ಸಮುದಾಯದ ಬಗ್ಗೆ ಸರ್ಕಾರ ಎಷ್ಟು ಆಸಕ್ತಿ ವಹಿಸಿದೆ ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ.
ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಅರಳು ಮಲ್ಲಿಗೆ ಗೇಟ್ ಬಳಿ ನಿರ್ಮಾಣ ಹಂತದಲ್ಲಿರುವ ಭವ್ಯವಾದ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣಗೊಂಡಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ನಾಯಕ ಸಮುದಾಯ ಸೇರಿದಂತೆ ಬಡ ಜನರಿಗೆ ಯಾವುದೇ ಶುಭ ಸಮಾರಂಭಗಳನ್ನು ನಡೆಸಲು ಜಾಗದ ಕೊರತೆ ಉಂಟಾಗಿತ್ತು. ನಾಯಕ ಸಮಾಜದ ಆಶಯದಂತೆ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನು ಮತ್ತು ಒಂದೂವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಇದೀಗ ಕಟ್ಟಡದ ಅಂತ್ಯದಲ್ಲಿ ಪ್ಲಾಸ್ಟಿಂಗ್, ಮೋಲ್ಡಿಂಗ್, ಸುಣ್ಣಬಣ್ಣ ಮಾಡಲು ಹಣವಿಲ್ಲದೆ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.
ಹಿಂದಿನ ಶಾಸಕರ ಅವಧಿಯಲ್ಲಿ ತಾಲ್ಲೂಕಿನ ಅರಳುಮಲ್ಲಿಗೆ ಗೇಟ್ ಬಳಿ ತಾಲ್ಲೂಕು ಆಡಳಿತದಿಂದ ಒಂದು ಎಕರೆ ಜಮೀನು ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಗುದ್ದಲಿ ಪೂಜೆ ನೆರೆವೇರಿಸಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆರಂಭದಲ್ಲಿ ಕಾಮಗಾರಿ ಭರದಿಂದ ಸಾಗಿತ್ತು. ಸಮುದಾಯ ಭವನ ಆದಷ್ಟು ಬೇಗನೆ ಪೂರ್ಣಗೊಂಡು ಲೋಕಾರ್ಪಣೆ ಯಾಗುತ್ತದೆ ಎನ್ನುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಆದರೆ ಕಾಮಗಾರಿ ಮಾತ್ರ ಕಾಂಕ್ರಿಟ್ ಹಂತಕ್ಕೆ ತಲುಪಿದ್ದು. ಕಳೆದ ಎರಡು ವರ್ಷದ ಹಿಂದೆ ಕಾಮಗಾರಿ ಸ್ಥಗಿತವಾಗಿದೆ.
ಈಗಿನ ಪರಿಸ್ಥಿತಿಯೇ ವಿಭಿನ್ನ!
ಕಾಮಗಾರಿ ಪೂರ್ಣಗೊಳ್ಳದ ಪರಿಣಾಮವಾಗಿ ಈ ಕಟ್ಟಡ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಿದೆ. ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭವನದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತು ಹಾವು ಚೇಳುಗಳ ಆವಾಸಸ್ಥಾನವಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಒಂದು ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಜಾಗದಲ್ಲಿ 5 ಗುಂಟೆ ಜಮೀನು ವಿವಾದಕ್ಕೆ ಸಿಲುಕಿದೆ. ಈ ಕುರಿತು ಕೋರ್ಟ್ ನಲ್ಲಿ ಪ್ರಕರಣದ ವಾದ ವಿವಾದ ನಡೆಯುತ್ತಿದೆ. ಈ ಬಗ್ಗೆ ಒತ್ತುವರಿಯಾಗಿರುವ 5 ಗುಂಟೆ ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ತಾಲ್ಲೂಕು ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ಕುಮಾರ್ ತಾಲ್ಲೂಕು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಅಂಚೆ ಕಚೇರಿ ಬಳಿಯ 19 ಗುಂಟೆ ಜಮೀನಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ವಾಲ್ಮೀಕಿ ಸಮಾಜದ ವಸತಿ ನಿಲಯಕ್ಕೆ ಈ ಹಿಂದೆ ಸರ್ಕಾರದಿಂದ ೬ ಕೋಟಿ ಅನುದಾನವೂ ಬಿಡುಗಟೆಯಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ. ಅಲ್ಲದೆ ಇದೇ ಯೋಜನೆ ದೇವನಹಳ್ಳಿಗೆ ವರ್ಗಾವಣೆಯಾಗಿರುವುದು ದುರಂತವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ತಾಲ್ಲೂಕು ಮಟ್ಟದ ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಹಿಂದಿನ ಸರ್ಕಾರದ ಅವಧಿಯಲ್ಲಿನ ಶಾಸಕರ ಶ್ರಮದಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರ ಒಂದು ಎಕರೆ ಜಮೀನು, 15 ಕೋಟಿ ರೂ. ಅನುದಾನ ಸಿಕ್ಕಿತ್ತು. ಇದ್ದ ಹಣದಲ್ಲಿ ಕಾಮಗಾರಿ ಮಾಡಲಾಗಿದೆ. ಉಳಿದ ಅನುದಾನ ಬಿಡುಗಡೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪಗೆ ಮನವಿ ಮಾಡಲಾಗಿದೆ. ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಅನುದಾನ ಬಿಡುಗಡೆ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಶಾಸಕ ಧೀರಜ್ ಮುನಿರಾಜು ಈ ಬಗ್ಗೆ ಗಮನ ಹರಿಸಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕು. ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಪ್ರೇಮ್ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿದ್ದಾರೆ. ನಿಷ್ಪ್ರಯೋಜಕ ಅಧ್ಯಕ್ಷ. ಸಮಾಜವನ್ನು 10 ವರ್ಷಗಳಿಂದ ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಹೇಳಿದ್ದಾರೆ.
ಇದೇ ವೇಳೆ, ಸರ್ಕಾರಕ್ಕೆ ಉಳಿದ 55 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. 5 ಗುಂಟೆ ಜಮೀನು ಕೋರ್ಟ್ ನಲ್ಲಿರುವುದು ತೊಡಕಾಗಿದೆ. ಮುಂದಿನ ವಿವಾರಣೆ ವೇಳೆಗೆ ಇತ್ಯರ್ಥಗೊಳಿಸಲು ಕ್ರಮವಹಿಸಲು ತಹಶೀಲ್ದಾರ್ ರೊಂದಿಗೆ ಚರ್ಚಿಸಲಾಗಿದೆ. ಅದಷ್ಟು ಶೀಘ್ರವಾಗಿ ಕಟ್ಟಡ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಉಮಾಪತಿ ತಿಳಿಸಿದ್ದಾರೆ.