ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಹಾಗೂ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ನಾಯಕರಿಗೆ ಸೂಚನೆ ನೀಡಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೂ ಆದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ಶನಿವಾರ ಮಂತ್ರಿಗಳ ಜತೆ ಉಪಹಾರಕೂಟದ ಸಭೆಯಲ್ಲಿ ಅವರು ನಡೆಸಿದ ಚರ್ಚೆ ವಿದ್ಯಮಾನಗಳ ಕೇಂದ್ರಬಿಂದುವಾಯಿತು.
ಸಭೆ ಬಳಿಕ ಸಿಎಂ ನಿವಾಸದ ಬಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳು ನೇರವಾಗಿ ತಿಳಿಸಿದ್ದಾರೆ. ನಾನು ಸೇರಿದಂತೆ ಯಾರೊಬ್ಬರೂ ಈ ವಿಚಾರವಾಗಿ ಮಾತನಾಡುವುದು ಬೇಡ. ಮಾಧ್ಯಮಗಳು ಪ್ರಶ್ನೆ ಕೇಳುತ್ತಾರೆ, ಆದರೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ. ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಅನಗತ್ಯ ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ ಸಚಿವರುಗಳಿಗೆ ತಮ್ಮ ಜಿಲ್ಲಾ ಪ್ರವಾಸ ಮಾಡಲು ಸೂಚನೆ ನೀಡಿದ್ದೆವು. ಕೆಲ ಸಚಿವರ ಪ್ರವಾಸಕ್ಕೆ ಸಮಿತಿ ಜೋಡಿಸಿರಲಿಲ್ಲ. ಈಗ ಸಮಿತಿಯಲ್ಲಿ ಸೇರಿಸುವ ಬಗ್ಗೆ ಚರ್ಚೆ ಮಾಡಲಾಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಹಾಗೂ ಅವುಗಳನ್ನು ಜನರಿಗೆ ತಲುಪಿಸುವುದರ ಬಗ್ಗೆ ಪರಿಶೀಲನಾ ಸಭೆ ಮಾಡುವಂತೆ ಸೂಚಿಸಲಾಗಿದೆ. ಇಂದು ಕೇವಲ 15 ಸಚಿವರ ಜತೆ ಚರ್ಚೆ ಮಾಡಲಾಗಿದ್ದು, ಉಳಿದವರ ಜತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಲೋಕಸಭೆ ಚುನಾವಣೆ, ಗ್ಯಾರಂಟಿ ಯೋಜನೆ ಜಾರಿ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದವರು ತಿಳಸಿದರು.