ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ತೀರ್ಮಾನದ ಬಳಿಕ ಇತರ ಪ್ರಕರಣಗಳ ವಿಚಾರದಲ್ಲೂ ಜನಹಿತ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಪ್ರತಿಧ್ವನಿಸಿದೆ. ಇದೀಗ ರೌಡಿ ಪಟ್ಟಿ ವಿಚಾರ ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಯ ಆದೇಶ ಹಿಂಪಡೆಯುವ ಸಂಪುಟ ಸಭೆ ತೀರ್ಮಾನದಂತೆಯೇ ಇತರ ಪ್ರಕರಣಗಳಲ್ಲೂ ಜನಹಿತ ಕ್ರಮ ಕೈಗೊಳ್ಳಲು ಕೋರಿ ವಕೀಲರ ಸಮೂಹದ ಸಂಸ್ಥೆ “ಲೀಗಲ್-ಐ’ ಮುಖ್ಯಸ್ಥ ಶಾಜಿ ಟಿ ವರ್ಗೀಸ್ (Shaji T Verghese) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಕುತೂಹಲದ ಕೇಂದ್ರಬಿಂದುವಾಗಿದೆ. ಅದರಲ್ಲೂ ಅಮಾಯಕರು ರೌಡಿ ಶೀಟರ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಅವರಿಗೆ ನ್ಯಾಯ ಸಿಗಬೇಕೆಂಬ ಪ್ರತಿಪಾದನೆ ಕುತೂಹಲಕಾರಿ ಬೆಳವಣಿಗೆಯಾಗಿದೆ.
ರಾಜ್ಯ ಸರ್ಕಾರವು ರೌಡಿ ಶೀಟರ್ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನೇ ಅನುಷ್ಠಾನಗೊಳಿಸಿಲ್ಲ. ನ್ಯಾಯಬದ್ಧ ಕ್ರಮಕ್ಕ್ಕಾಗಿ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಪಾಲಿಸುವ ಬದಲು ಮೇಲ್ಮನವಿ ಸಲ್ಲಿಸಿದೆ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಒಂದು ನಡೆ ಜನಸಾಮಾನ್ಯರ ವಿಚಾರದಲ್ಲಿ ಇನ್ನೊಂದು ರೀತಿಯ ನಡೆ ಎಂಬ ಅಪವಾದ ಬೇಡ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ವಕೀಲರೂ ಆದ ಶಾಜಿ ಟಿ ವರ್ಗೀಸ್, ಡಿಕೆಶಿ ವಿಚಾರದಲ್ಲಿ ಕೈಗೊಂಡ ತೀರ್ಮಾನದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಹೈಕೋರ್ಟಿಗೆ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂಪಡೆದು ನ್ಯಾಯಪೀಠದ ಆದೇಶವನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ, ಗೃಹ ಸಚಿವರು, ಕಾನೂನು ಸಚಿವರು, ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿ ಹಾಗೂ ಅಡ್ವೊಕೇಟ್ ಜನರಲ್ ಅವರಿಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ.
‘ಲೀಗಲ್-ಐ’ ಪತ್ರದಲ್ಲಿ ಏನಿದೆ?
-
23.11.2023 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಅಕ್ರಮ ಆಸ್ತಿ ಕುರಿತು ಸಿಬಿಐ ತನಿಖೆಯ ಆದೇಶ ಹಿಂಪಡೆಯಲು ತೀರ್ಮಾನ ಕೈಗೊಂಡಿರುತ್ತದೆ. ಹಿಂದಿನ ಸರ್ಕಾರದ ಅವಧಿಯ ಕ್ರಮವನ್ನು ಈಗಿನ ಸಚಿವ ಸಂಪುಟದಲ್ಲಿ ಹಿಂಪಡೆಯಲು ತೀರ್ಮಾನಿಸಿರುವ ಬಗ್ಗೆ ರಾಜಕೀಯ ಪಂಡಿತರು ಹಾಗೂ ಕಾನೂನು ತಜ್ಞರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
-
ಹಿಂದಿನ ಸರ್ಕಾರವು ಆಗ ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ದದ ಅಕ್ರಮ ಆಸ್ತಿ ಕುರಿತು ಸಿಬಿಐ ತನಿಖೆಗೆ ಆದೇಶಿಸುವ ಸಂದರ್ಭದಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಎಂಬ ಲೋಪವನ್ನು ಪರಿಗಣಿಸಿ, 23.11.2023ರಂದು ಸಚಿವ ಸಂಪುಟ ಸಭೆಯು ಪ್ರಕರಣದ ಆದೇಶವನ್ನು ಹಿಂಪಡೆಯಲು ತೀರ್ಮಾನ ಕೈಗೊಂಡಿದೆ. ಅದರಂತೆಯೇ, ಹಿಂದಿನ ಸರ್ಕಾರದ ಅವಧಿಯ ಇತರ ಪ್ರಕರಣಗಳ ಬಗ್ಗೆಯೂ ಸಾರ್ವಜನಿಕ ಹಿತ ಅನುಸಾರ ನ್ಯಾಯಯುತ ಕ್ರಮ ಕೈಗೊಳ್ಳಬೇಕಿದೆ.
-
ಪ್ರಮುಖವಾಗಿ, ರಾಜ್ಯದಲ್ಲಿ ಅವೆಷ್ಟೋ ಮಂದಿಯನ್ನು ಕೆಲವು ಪ್ರಕರಣಗಳ ಆರೋಪಿಯಾಗಿದ್ದಾರೆಂಬ ಕಾರಣಕ್ಕಾಗಿ ರೌಡಿ ಪಟ್ಟಿಗೆ ಸೇರಿಸಲಾಗಿದೆ. ಅನೇಕರು ನಿರ್ದೋಷಿಗಳೆಂದು ನ್ಯಾಯಾಲಯಗಳಿಂದ ಘೋಷಿಸಲ್ಪಟ್ಟಿದ್ದರೂ ಅವರನ್ನು ರೌಡಿಪಟ್ಟಿಯಿಂದ ಬಿಡುಗಡೆ ಮಾಡಲಾಗಿಲ್ಲ. ತಮ್ಮನ್ನು ರೌಡಿ ಹಣೆಪಟ್ಟಿಯಿಂದ ಮುಕ್ತಗೊಳಿಸಲು ಕೋರಿ ಅಮಾಯಕರು ಮನವಿ ಮಾಡಿದರೂ ಸರ್ಕಾರ ಪರಿಗಣಿಸಿಲ್ಲ. ಈ ಕುರಿತಂತೆ W.P.No:4504/2021 ಪ್ರಕರಣದಲ್ಲಿ ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 22.04.2022ರಂದು ತೀರ್ಪು ಪ್ರಕಟಿಸಿ, ರೌಡಿಶೀಟರ್ ಸಿದ್ಧಪಡಿಸುವ ಸಂದರ್ಭದಲ್ಲಿ ಸೂಕ್ತ ಮಾನದಂಡಗಳನ್ನು ಅನುಸರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ವಕೀಲರ, ಕಾನೂನು ತಜ್ಞರ ಅಭಿಪ್ರಾಯಗಳನ್ನಾಧರಿಸಿ ಸಾರ್ವಜನಿಕರ ಹಿತವನ್ನು ಮನಗಂಡು ನಿರ್ದೇಶನ ನೀಡುತ್ತಿರುವುದಾಗಿಯೂ ನ್ಯಾಯಪೀಠ ಹೇಳಿತ್ತು. ಆದರೆ ರಾಜ್ಯ ಸರ್ಕಾರವು ಈ ತೀರ್ಪನ್ನು ಅನುಷ್ಠಾನಗೊಳಿಸುವ ಬದಲು ಸದರಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ (W.A. No:633/2022) ಸಲ್ಲಿಸಿದೆ.
-
ಇವಿಷ್ಟೇ ಅಲ್ಲ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೀಡಲಾಗಿರುವ ಅನೇಕ ಆದೇಶ, ಪ್ರಾಸಿಕ್ಯೂಷನ್ ಅನುಮತಿಗಳ ಬಗ್ಗೆ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ವ್ಯತಿರಿಕ್ತ ತೀರ್ಮಾನ ಕೈಗೊಂಡಿವೆ. ಬೇರೆ ಪ್ರಕರಣಗಳಲ್ಲಿ ತನಿಖೆ ನಡೆಸಿರುವ ಸಿಬಿಐ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸದರಿ ಪ್ರಕರಣಗಳು ಹಿಂದಿನ ಸರ್ಕಾರದ ಅವಧಿಯ ಆದೇಶಗಳು ಎಂಬ ಕಾರಣಕ್ಕಾಗಿ ಮನವಿಯನ್ನು ಪುರಸ್ಕರಿಸಿಲ್ಲ.
-
ಜನಪ್ರತಿನಿಧಿಗಳ ವಿಚಾರದಲ್ಲಿ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆಯೇ ಇತರ ಪ್ರಕರಣಗಳ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಪ್ರಮುಖವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೈಕೋರ್ಟಿಗೆ ಸಲ್ಲಿಸಲಾಗಿರುವ W.A.No:633/2022 ಮೇಲ್ಮನವಿ ಅರ್ಜಿಯನ್ನೂ ಹಿಂಪಡೆದು, ಜನಹಿತಕ್ಕೆ ಅನುಗುಣವಾಗಿ ನ್ಯಾಯಾಲಯದ ಮೂಲ ತೀರ್ಪನ್ನು ಅನುಷ್ಠಾನಗೊಳಿಸಬೇಕೆಂದು ಶಾಜಿ ಟಿ ವರ್ಗೀಸ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.