ಕರುನಾಡು ಕಂಡ ಸಿಂಗಂ, ಐಪಿಎಸ್ ಅಧಿಕಾರಿ ದಕ್ಷತೆ- ಪ್ರಾಮಾಣಿಕತೆಗೆ ಹೆಸರಾಗಿದ್ದವರು ಅಣ್ಣಾಮಲೈ. ರಾಜ್ಯದ ಹಲವೆಡೆ ಎಸ್ಪಿಯಾಗಿ ನಿಷ್ಟುರ ನಿರ್ಧಾರಗಳಿಂದ ಯುವಜನರಿಗೆ ಸ್ಫೂರ್ತಿಯ ಸೆಳೆಯಾಗಿದ್ದವರು ಅಣ್ಣಾಮಲೈ. ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಅಣ್ಣಾಮಲೈ ಎಲ್ಕೆಲ್ಲಾ ಕರ್ತವ್ಯ ನಿರ್ವಹಿಸಿದ್ದರೋ ಅಲ್ಲೆಲ್ಲಾ ತನ್ನ ಕರ್ತವ್ಯ ಶೈಲಿಯಿಂದಲೇ ಜನರ ಗಮನ ಕೇಂದ್ರೀಕರಿಸಿದ್ದರು. ಆದರೆ ಕೆಲವೇ ವರ್ಷಗಳ ಸೇವೆಯ ನಂತರ ಅವರು ಐಪಿಎಸ್ ಸೇವೆಗೇ ಗುಡ್ ಬೈ ಹೇಳಿರುವುದು ಅವರ ಅಚ್ಚರಿಯ ನಿರ್ಧಾರವಾಗಿತ್ತು. ಅವರೀಗ ಸಿನಿಮಾ ನಟರಾಗಿದ್ದಾರೆ ಎನ್ನುವುದೇ ಕುತೂಹಲಕಾರಿ ಸಂಗತಿ.
ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ರಾಜಕೀಯದ ಸೆಳೆತದಿಂದಾಗಿ ಪೊಲೀಸ್ ಸೇವೆಗೆ ಗುಡ್ಬೈ ಹೇಳಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಅವರು ಬಿಜೆಪಿ ಸೇರ್ತಾರೋ? ಕಾಂಗ್ರೆಸ್ಗೆ ಸೇರ್ಪಡೆಯಾಗುವರೇ ಎಂಬ ಪ್ರಶ್ನೆಗಳೂ ಹರಿದಾಡುತ್ತಿದ್ದವು. ಆದರೆ ಅಣ್ಣಾಮಲೈ ಮಾತ್ರ ತನ್ನ ಮುಂದಿನ ನಡೆ ಏನೆಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅಣ್ಣಾಮಲೈ ಎಲ್ಲಿದ್ದಾರೆ? ಹೇಗಿದ್ದಾರೆ? ಯಾವ ಫೀಲ್ಡ್ನಲ್ಲಿ ಅವರು ಸಕ್ರಿಯರಾಗಿದ್ದಾರೆ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಅದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ. ಅಣ್ಣಾಮಲೈ ರಾಜಕಾರಣಿಯಾಗಿಲ್ಲ; ಅವರು ಸಿನಿಮಾ ರಂಗವನ್ನು ಆಯ್ಕೆ ಮಾಡಿದ್ದಾರೆ.
ಅವರೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ‘ಅರಬ್ಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಗದ್ವಿಖ್ಯಾತ ಈಜು ಪಟು ಕೆ.ಎಸ್.ವಿಶ್ವಾಸ್ ಜೀವನ ಕಥೆಯಾಧಾರಿತ ಸಿನಿಮಾದಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ರಾಜ್ಕುಮಾರ್ ನಿರ್ದೇಶನದ ಚಿತ್ರ ಇದಾಗಿದ್ದು, ಇದೊಂದು ಸತ್ಯಕಥೆಯಾದಾರಿತ ಸಿನಿಮಾ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾವಾಗಿದ್ದರಿಂದ ನಟಿಸಲು ಅಣ್ಣಾಮಲೈ ಒಪ್ಪಿಕೊಂಡಿದ್ದಾರಂತೆ. ಡಿಸೆಂಬರ್ 4ರಿಂದ ‘ಅರಬ್ಬೀ’ ಸಿನಿಮಾದ ಶೂಟಿಂಗ್ ಆರಂಭವಾಗಲಿದೆಯಂತೆ.
ಅಂದ ಹಾಗೆ ಅಣ್ಣಾಮಲೈ ನಟಿಸಲಿರುವ ‘ಅರಬ್ಬೀ’ ಸಿನಿಮಾದ ಕಥಾನಾಯಕ ಕೆ.ಎಸ್.ವಿಶ್ವಾಸ್. ಎರಡೂ ಕೈಗಳಿಲ್ಲದಿದ್ದರೂ ಈಜುಪಟುವಾಗಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದವರು ಕೆ.ಎಸ್.ವಿಶ್ವಾಸ್. ಈ ಸಿನಿಮಾದಲ್ಲಿ ಅಣ್ಣಾಮಲೈ ಒಬ್ಬ ಕೋಚ್ ಆಗಿ ನಟಿಸಲಿದ್ದಾರಂತೆ. ಈ ಸಿನಿಮಾಗೆ ಈ ಧೀಮಂತ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಬರೀ ಒಂದು ರೂಪಾಯಿ. ಈ ಸಂಬಾವನೆಯನ್ನೂ ಅವರು ಶಬರಿಮಲೈ ಅಯ್ಯಪ್ಪನ ಹುಂಡಿಗೆ ಹಾಕ್ತಾರಂತೆ. ಏನಿದು ಕುತೂಹಲ ಅಲ್ಲವೇ?