ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್’ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ನಡೆಸಲು ರಂಗ ಸಜ್ಜಾಗಿದೆ. ನಿಧಾನಗತಿಯಲ್ಲಿ ರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್ ಸಿಪಿ ಮುಖ್ಯಸ್ಥ ಶರಾದ್ ಪವಾರ್ ಮೈತ್ರಿ ಸರ್ಕಾರ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ.
ಮೈತ್ರಿ ಸರ್ಕಾರ ರಚನೆ ಸಂಬಂಧ ಕಸರತ್ತು ನಡೆದಿದ್ದರೂ ಕಾಂಗ್ರೆಸ್ ಒಂಟಿಯಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂಬುದರ ಬಗ್ಗೆ ಇಬ್ಬರೂ ನಾಯಕರು ಕುಳಿತು ಚರ್ಚಿಸುತ್ತಾರೆ. ನಂತರ ನಿರ್ಧಾರ ಕೈಗೊಳ್ಳುತ್ತಾರೆಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸಹಭಾಗಿತ್ವದ ಸರ್ಕಾರವೇ ಅಸ್ತಿತ್ವಕ್ಕೆ ಬರುವ ವಿಶ್ವಾಸವನ್ನು ಕೈ ನಾಯಕರು ಹೊಂದಿದ್ದಾರೆ. ಈ 3 ಮೈತ್ರಿ ಪಕ್ಷಗಳ ಸರ್ಕಾರ 5 ವರ್ಷ ಪೂರೈಸಲಿದೆ ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಕೂಡ ಹೇಳಿದ್ದಾರೆ. ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಕೂಡ ಶಿವಸೇನೆಯ ನೇತೃತ್ವದಲ್ಲಿಯೇ ಸರ್ಕಾರ ರಚನೆಯಾಗಲಿದೆ. 25 ವರ್ಷ ಕಾಲ ಶಿವಸೇನೆಯು ಮಹಾರಾಷ್ಟ್ರ ಆಳಲಿದೆ ಎಂದಿದ್ದಾರೆ. ಸಾಮಾನ್ಯ ಕಾರ್ಯಸೂಚಿಯನ್ನು 3 ಪಕ್ಷಗಳು ಸಿದ್ಧಪಡಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಕ್ಕೆ ಶಿವಸೇನೆಯದೇ ನೇತೃತ್ವವಿರಲಿದೆ ಎಂಬ ಒಡಂಬಡಿಕೆಗೂ ಬರಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಎಲ್ಲಾ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಸೋನಿಯಾ ಇದಕ್ಕೆ ಒಪ್ಪಿಗೆ ನೀಡಿದ ನಂತರ ನಾಳೆ ಮೈತ್ರಿಯ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.