ಮುಂಬಯಿ: ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಠಾತ್ ರಾಜೀನಾಮೆ ನೀಡಿದ್ದಾರೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಭಾರತೀಯ ಜನತಾ ಪಕ್ಷ ಸರ್ಕಾರ ಬುಧವಾರ ಸಾಯಂಕಾಲದೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ತರಾತುರಿಯಲ್ಲಿ ಬಹುಮತ ಸಾಬೀತು ಅಸಾಧ್ಯ ಎಂದು ಮನಗಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಬಳಿಯಲ್ಲಿ ಸರಕಾರ ರಚನೆ ಮಾಡುವಷ್ಟು ಸಂಖ್ಯಾಬಲ ಇಲ್ಲದೇ ಇರುವುದರಿಂದ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ದೇವೇಂದ್ರ ಫಡ್ನವೀಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರಷ್ಟೇ ಅಲ್ಲ, ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿ ಉಪಮುಖ್ಯಮಂತ್ರಿಯಾಗಿದ್ದ ಎನ್.ಸಿ.ಪಿ.ನಾಯಕ ಅಜಿತ್ ಪವಾರ್ ಅವರು ರಾಜೀನಾಮೆ ಸಲ್ಲಿಸಿದರು.
ನಾಲ್ಕು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಫಡ್ನವೀಸ್ ಸರಕಾರ ಅಂತ್ಯ ಕಾಣುತ್ತಿದ್ದಂತೆಯೇ, ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಮೈತ್ರಿಕೂಟ ನೂತನ ಸರಕಾರ ರಚನೆಗೆ ಕಾರ್ಯತಂತ್ರ ರೂಪಿಸಿದೆ.