ಬೆಂಗಳೂರು: ವಿದೇಶದಲ್ಲಿ ಅವಿತು ಭೂಗತ ಜಗತ್ತನ್ನು ಆಳುತ್ತಿದ್ದ ಕುಖ್ಯಾತ ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಕೊನೆಗೂ ಬೆಂಗಳೂರು ಪೊಲೀಸರ ವಶಕ್ಕೊಳಗಾಗಿದ್ದಾನೆ. ಸುಮಾರು 25 ವರ್ಷಗಳ ಕಾಲ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ, ಕೊನೆಗೆ ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತನಾಗಿದ್ದ ರವಿ ಪೂಜಾರಿಯನ್ನು ಭಾರತದ ವಶಕ್ಕೆ ಪಡೆಯುವ ಪ್ರಕ್ರಿಯೆ ಅನೇಕ ತಿಂಗಳುಗಳಿಂದ ನಡೆಯುತ್ತಿತ್ತು. ಅಂತೂ ಇಂತೂ ಕೊನೆಗೂ ಈ ಕಾರ್ಯದಲ್ಲಿ ಪೊಲೀಸರು ಯಶೋಗಾಥೆ ಬರೆದಿದ್ದಾರೆ.
ಸೌಮೆಂದು ಮುಖರ್ಜಿ ಹರ್ಷ
ರವಿ ಪೂಜಾರಿ ಎಂಬುದು ಭೂಗತ ಜಗತ್ತಿನಲ್ಲಿ ಭೀತಿಯ ಹೆಸರಾಗಿತ್ತು. ಆತನ ಹೆಸರು ಕೇಳಲಾಗುತ್ತಿತ್ತೇ ಹೊರತು ಆತ ಹೇಗಿದ್ದಾನೆ ಎಂಬುದು ಪೊಲೀಸರಿಗೂ ತಿಳಿದಿರಲಿಲ್ಲ. ರೇಖಾ ಚಿತ್ರಗಳಿಗಷ್ಟೇ ಆತನ ಫೋಟೋ ಸೀಮಿತವಾಗಿತ್ತು. ಆತನ ಹೆಜ್ಜೆ ಜಾಡು ಬೆನ್ನತ್ತಲು ಮುನ್ನುಡಿ ಬರೆದವರೇ ಐಪಿಎಸ್ ಅಧಿಕಾರಿ ಸೌಮೆಂದು ಮುಖರ್ಜಿ. ಇವರೀಗ ಈಗ ಬೆಂಗಳೂರು ಪಶ್ಚಿಮವಲಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದಾರೆ.
ಕರಾವಳಿ ತೀರದಲ್ಲಿ ತನ್ನ ಜಾಲವನ್ನು ಸ್ಥಾಪಿಸಿದ್ದ ರವಿ ಪೂಜಾರಿ ವಿದೇಶಲ್ಲಿದ್ದುಕೊಂಡೇ ತನ್ನ ಭೂಗತ ಜಗತ್ತನ್ನು ಆಳುತ್ತಿದ್ದ. ಸುಮಾರು ಒಂದೂವರೆ ದಶಕಗಳ ಹಿಂದೆಯೇ ಆಗ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸೌಮೆಂದು ಮುಖರ್ಜಿಯವರು ರವಿ ಪೂಜಾರಿ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದರು.
ರವಿ ಪೂಜಾರಿ ವಿದೇಶದಲ್ಲಿ ಅವಿತು ತನ್ನ ಸಹಚರರ ಮೂಲಕ ಕೃತ್ಯಗಳನ್ನು ನಡೆಸುತ್ತಿದ್ದನೆನ್ನಲಾಗುತ್ತಿತ್ತು. ಹಾಗಾಗಿ ಸೌಮೆಂದು ಮುಖರ್ಜಿಯವರೇ ಮೊದಲ ಬಾರಿಗೆ ರವಿ ಪೂಜಾರಿಗೆ ಲುಕೌಟ್ ನೋಟೀಸನ್ನು ಸಿದ್ದ ಪಡಿಸಿದ್ದರು. ನಂತರ ಬೆಂಗಳೂರಿನ ಕೋರಮಂಗಲ ಪ್ರಕರಣ, ವಿವೇಕನಗರ ಡಬಲ್ ಮರ್ಡರ್ ಕೇಸಿನಲ್ಲೂ ರವಿಪೂಜಾರಿ ಕೈವಾಡದ ಸಂಖ್ಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗ ಡಿಸಿಪಿಯಾಗಿದ್ದ ಸೌಮೆಂದು ಮುಖರ್ಜಿಯವರು ಮತ್ತೆ ರವಿ ಪೂಜಾರಿ ವಿರುದ್ದದ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು. ಇದೀಗ ಈ ಗ್ಯಾಂಗ್ ಸ್ಟಾರನ್ನು ಬೆಂಗಳೂರಿಗೆ ಕರೆ ತಂದ ಪೊಲೀಸರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸೌಮೆಂದು ಮುಖರ್ಜಿ, ಎಲ್ಲಾ ಪ್ರಕರಣಗಳ ತನಿಖೆ ಪರಿಪೂರ್ಣವಾಗಲಿದೆ ಎಂದು ವಿಸ್ವಾಸ ವ್ಯಕ್ತಪಡಿಸಿದ್ದಾರೆ.