(ಜಯ ಪ್ರಕಾಶ್)
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಪೂಜೆ ಪುನಸ್ಕಾರ, ವೈದಿಕ ವಿಧಿ ವಿಧಾನಗಳಿಗಷ್ಟೇ ದೇವಾಲಯಗಳು ಸೀಮಿತವಾಗಿಲ್ಲ. ಹಿಂದೂ ಸಂಸ್ಕೃತಿ-ಪರಂಪರೆ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಲು ಈ ಧಾರ್ಮಿಕ ಕೇಂದ್ರ ಸಜ್ಜಾಗುತ್ತಿವೆ.
ಸಾಮಾನ್ಯವಾಗಿ ದೇವಾಲಯ ಬೆರಳೆಣಿಕೆಯ ದೇವರ ಮೂರ್ತಿ ಪೂಜೆಗೆ ಸೀಮಿತವಾಗುವುದುಂಟು. ಇದೀಗ ಆ ದೇವಾಲಯಗಳು ಮುಕ್ಕೋಟಿ ದೇವರನ್ನು ಹೊತ್ತುಕೊಂಡಿರುವ ಗೋವುಗಳ ಆರಾಧನೆಯ ತಾಣವಾಗಲಿದೆ. ಇದಕ್ಕೆಂದು ವೇದಿಕೆ ಕಲ್ಪಿಸಿದ್ದಾರೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ.
ರಾಜ್ಯದ ಪ್ರಮಖ 25 ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕ್ರಮ ಆರಂಭಿಸಿದ್ದಾರೆ.
ಪ್ರಕೃತಿಯನ್ನು ಆರಾಧಿಸುವುದು ಹಿಂದೂ ಸಂಸ್ಕೃತಿಯ ಒಂದು ಭಾಗ. ಅದರಲ್ಲೂ ಹಾಲು ನೀಡುವ ಹಸುಗಳು ಹಿಂದೂಗಳ ಪಾಲಿಗೆ ಜೀವಂತ ದೈವ. ಆದರೆ ಇದೇ ಗೋವುಗಳು ಕಟುಕರ ಪಾಲಾಗುತ್ತಿರುದರಿಂದ ಸಮಾಜದಲ್ಲಿ ಆಕ್ರೋಶಗಳೂ ಭುಗಿಲೇಳುತ್ತಿವೆ. ಗೋವುಗಳ ರಕ್ಷಣೆಗೆ ಸೂಕ್ತ ವೇದಿಕೆ ಇಲ್ಲ ಎಂಬ ಆರೋಪಗಳೂ ಕೇಳಿಬರುತ್ತಲಿವೆ. ಈ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಸಚಿವರು ವಿನೂತನ ಯೋಜನೆಗೆ ಮುನ್ನುಡಿ ಬರೆದಿದ್ದಾರೆ.
ರಾಜ್ಯದಲ್ಲಿ ಎ ದರ್ಜೆಯ ವ್ಯಾಪ್ತಿಗೆ ಬರುವ ದೇವಾಲಯಗಳ ಸುತ್ತ ಮುತ್ತ 10 ರಿಂದ 15 ಎಕರೆ ಭೂಮಿ ಗುರುತಿಸಿ ಅಲ್ಲಿ ಗೋಶಾಲೆ ನಿರ್ಮಿಸುವುದೇ ವಿನೂತನ ಯೋಜನೆ. ಇದಕ್ಕಾಗಿ ಜಾಮೀನು ಗುರುತಿಸಲು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದೊಂದಿಗೆ ಗೋಶಾಲೆಗಳನ್ನು ಪ್ರಾರಂಭಿಸಿ, ಪ್ರತಿ ಗೋಶಾಲೆಯಲ್ಲಿ ಸುಮಾರು 200 ಗೋವುಗಳನ್ನು ಸಾಕುವ ಉದ್ದೇಶ ಸರ್ಕಾರದ್ದು.
ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಮುಜುರಾಯಿ ದೇವಾಲಯಗಳಿದ್ದು ಈ ದೇಗುಲಗಳ ಆಸ್ತಿ ಸಂರಕ್ಷಿಸಲು ಮತ್ತು ಅಲ್ಲಿನ ಆದಾಯ ಸೋರಿಕೆ ತತಡೆಗಟ್ಟಿ ಅದನ್ನು ಸಮಾಜಮುಖಿ ಕೈಂಕರ್ಯಕ್ಕೆ ಬಳಸುವುದೇ ಸಚಿವರ ಈ ಯೋಜನೆಯ ಮಹಾ ಉದ್ದೇಶವಾಗಿದೆ.
ರಾಜ್ಯದ ನೂರು ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸಪ್ತಪದಿನೆಯನ್ನು ಆರಂಭಿಸಿ ಮೆಚ್ಚುಗೆಗೆ ಪಾತ್ರವಾಗಿರುವ ಮುಜರಾಯಿ ಮಂತ್ರಿ ಪ್ರಸ್ತುತ ಗೋವುಗಳ ಪಾಲನೆ ಆರಾಧನೆ ವಿಚಾರದಿಂದಾಗಿಯೂ ನಾಡಿನ ಗಮನಕೇಂದ್ರೀಕರಿಸಿದ್ದಾರೆ.