ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ದುಬಾರಿಯಾಗಿದೆ. ಸರ್ಕಾರದ ಈ ನಿರ್ಧಾರ ಸರಿಯೇ ಎಂಬ ಪ್ರಶ್ನೆಗಳು ಜನ ಸಾಮಾನ್ಯರ ಕಡೆಯಿಂದ ಹರಿದುಬರುತ್ತಿವೆ. ಈ ವಿಚಾರವೇ ಇದೀಗ ಚರ್ಚೆಗೆ ಗ್ರಾಸವಾಗಿರುವುದು.
ಕಳೆದ ಹಲವು ವರ್ಷಗಳಿಂದ ಕೆಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ ಎಂಬುದು ಸಾರಿಗೆ ನಿಗಮದ ಅಧಿಕಾರಿಗಳ ವಾದ. ಇದು ಸತ್ಯ ಹಾಗೂ ಸ್ಪಷ್ಟ. ಸಾರಿಗೆ ನಿಗಮ ನಷ್ಟದಲ್ಲಿದೆ ಎಂಬುದು ಮತ್ತೊಂದು ಕಾರಣ. ಇದೂ ಕೂಡಾ ನಿತ್ಯ ಸತ್ಯ. ಆದರೆ ಲಾಭ ಗಳಿಕೆಯ ಉದ್ದೇಶವನ್ನೇ ಹೊಂದದ ಸಾರಿಗೆ ನಿಗಮಕ್ಕೆ ಲಾಭ-ನಷ್ಟದ ಪ್ರಶ್ನೆ ಏಕೆ ಎಂಬುದು ಪ್ರಜ್ಞಾವಂತರು ಮುಂದಿಟ್ಟಿರುವ ಅಭಿಪ್ರಾಯ.
ಅಂದಿನ ರಾಷ್ಟ್ರೀಕರಣದ ಉದ್ದೇಶ ಮರೆತ ಸರ್ಕಾರ?
ಕೆಲ ದಶಕಗಳ ಹಿಂದೆಯೇ ಅವೈಜ್ಞಾನಿಕ ಸೇವೆಯ ಬಗ್ಗೆ ಆಕ್ರೋಶ ಭುಗಿಲೆದ್ದಾಗ ಖಾಸಗಿ ಬಸ್ಸುಗಳನ್ನು ಸರ್ಕಾರವು ರಾಷ್ಟ್ರೀಕರಣ ಮಾಡಿತ್ತು. ಅದು ಇತಿಹಾಸ ಮಾತ್ರವಲ್ಲ, ಈಗಿನ ತಲೆಮಾರಿಗೂ ಎಚ್ಚರಿಕೆ ನೀಡಬಲ್ಲ ಚರಿತ್ರೆ. ಆದರೆ ಇದೀಗ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಕೆಎಸ್ಸಾರ್ಟಿಸಿಯೇ ಈ ರೀತಿಯ ಹಾದಿಯಲ್ಲಿದೆ ಎಂಬುದು ದುರದೃಷ್ಟಕರ ಸಂಗತಿ.
ಸರ್ಕಾರಿ ಸಂಸ್ಥೆಗಳು ಲಾಭದ ಉದ್ದೇಶವನ್ನಿಟ್ಟುಕೊಳ್ಳುವಂತಿಲ್ಲ. ಅದೇ ನಿಯಮ ಕೆಸ್ಸಾರ್ಟಿಸಿಗೂ ಅನ್ವಯವಾಗುತ್ತದೆ. ಅದಾಗಿಯೂ ಈ ಸಾರಿಗೆ ಸಂಸ್ಥೆಗೆ ಸರ್ಕಾರ ಅನುದಾನ ನೀಡುತ್ತದೆ. ಅದು ಕೂಡಾ ತೆರಿಗೆ ರೂಪದಲ್ಲಿ ಜನಸಾಮಾನ್ಯರು ನೀಡಿರುವ ಹಣ. ಜೊತೆಗೆ ಜೆ-ನರ್ಮ್ ಸಹಿತ ಕೇಂದ್ರ ಸರ್ಕಾರದಿಂದ ಭರಪೂರ ಆರ್ಥಿಕ ನೆರವು ಹರಿದು ಬರುತ್ತಿದೆ. ಬಸ್ ನಿಲ್ದಾಣಗಳಿಗೆ ಸ್ತಳಿಯ ಸಂಸ್ಥೆಗಳೇ ಜಮೀನು ಒದಗಿಸುತ್ತವೆ. ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೂ ಸರ್ಕಾರವೇ ಹಣ ಒದಗಿಸುತ್ತದೆ. ಅಷ್ಟೇ ಅಲ್ಲ, ಪ್ರಮುಖ ಬಸ್ ನಿಲ್ದಾಣಗಳ ಕಟ್ಟಡಗಳಿಂದ ಸಂಗ್ರಹವಾಗುವ ಬಾಡಿಗೆ ಹಣದ ಮೊತ್ತ ಎಷ್ಟು ಕೋಟೆಗಳೆಂದು ಲೆಕ್ಕ ಹಾಕಬೇಕಿದೆ. ಹೀಗಿದ್ದರೂ ನಷ್ಟ ಎಂಬ ಪದ ಆ ಸಂಸ್ಥೆಯ ಕಡೆಯಿಂದ ದೂರವಾಗಿಲ್ಲವೇಕೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಿದೆ.
ಕಳೆದ ಕೆಲ ವರ್ಷಗಳ ಹಿನ್ನೋಟ ಗಮನಿಸಿದರೆ ಅಸಂಖ್ಯ ಬಸ್ ಗಳನ್ನು ಖರೀದಿ ಮಾಡಲಾಗಿದ್ದು ಅದರಲ್ಲಿ ಸರ್ಕಾರದ ಅನುದಾನವೇ ಬಹುಪಾಲು.
ಅದಿರಲಿ, ಬಸ್ ನಿಲ್ದಾಣಗಳ ಹೆಸರಲ್ಲಿ ಬಹುಮಹಡಿಗಳ ಕಟ್ಟಡ ನಿರ್ಮಿಸಲಾಗಿದೆ. ಅದರ ವೆಚ್ಚವನ್ನು ಇಲಾಖೆಯ ಖರ್ಚು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಆದರೆ ಇದಕ್ಕೆ ಸರ್ಕಾರ ನೀಡುವ ನೆರವಿನ ಲೆಕ್ಕದ ಬಗ್ಗೆ ತುಟಿಕ್ ಪಿಟಿಕ್ ಅನ್ನುವುದಿಲ್ಲ. ಈ ರೀತಿಯ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳಿಂದ ಪ್ರಯಾಣಿಕರಿಗೇನು ಲಾಭ? ಈ ಕಟ್ಟಡಗಳ ನಿರ್ವಹಣೆಯ ವೆಚ್ಚವನ್ನೂ ಸಂಸ್ಥೆಯ ಒಟ್ಟಾರೆ ಖರ್ಚು ಎಂದು ತೋರಿಸಿ ಆದಾಯದ ಜೊತೆ ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತದೆ. ಈ ಲೆಕ್ಕ ಪಕ್ಕಾ ಆಗದೆಯೇ ನಷ್ಟ ಎಂದು ಬಿಂಬಿಸಲಾಗುತ್ತದೆ ಎಂಬುದು ಪಂಡಿತರ ವಿಶ್ಲೇಷಣೆ.
ಅದಿರಲಿ, ಖಾಸಗಿ ಬಸ್ ಪ್ರಯಾಣ ದರಕ್ಕಿಂತ ಸರಕಾರಿ ಬಸ್ಗಳಲ್ಲಿ ಟಿಕೆಟ್ ದರ ಕಡಿಮೆ ಇರಬೇಕಿದೆ. ಆದರೆ ಇಂದು ಸರ್ಕಾರಿ ಬಸ್ಗಳಲ್ಲಿ ಪ್ರಯಾಣವು ಖಾಸಗಿ ಬಸ್ಗಳಿಗಿಂತ ದುಬಾರಿಯಾಗಿದೆ.
ಹೆಚ್ಡಿಕೆ ನಿರ್ಧಾರ ಅರ್ಥಪೂರ್ಣ..
ಕಳೆದ ವರ್ಷವೂ ಕೆಎಸ್ಸಾರ್ಟಿಸಿ ಇದೇ ರೀತಿಯ ಆರ್ಥಿಕ ಸಂಕಷ್ಟವನ್ನು ಎದುರಿಸಿತ್ತು. ಅನೇಕ ವರ್ಷಗಳಿಂದ ಟಿಕೆಟ್ ದರ ಪರಿಷ್ಕರಣೆ ಮಾಡದ ಹಿನ್ನೆಲೆಯಲ್ಲಿ ಕಳೆದ ವರ್ಷ ದರ ಏರಿಸಲು ನಿರ್ಧರಿಸಲಾಯಿತು. ದರ ಏರಿಕೆಯ ಆದೇಶವನ್ಬೂ ಹೊರಡಿಸಲಾಯಿತು. ಆದರೆ ವಸ್ತುಸ್ಥತಿ ಅರಿತ ಆಗಿನ ಸಿಎಂ ಕುಮಾರಸ್ವಾಮಿ ಈ ಆದೇಶವನ್ನೇ ರದ್ದು ಮಾಡಿದರು. ಆದರೆ ಇದೀಗ ಬಿಜೆಪಿ ಸರ್ಕಾರ ಮತ್ತೆ ಟಿಕೆಟ್ ದರ ಏರಿಸಿದೆ.
ಇದು ಜನಸಾಮಾನ್ಯರನ್ನಷ್ಟೇ ಅಲ್ಲ, ಪ್ರತಿಪಕ್ಷಗಳ ಮುಖಂಡರನ್ನೂ ಕೆರಳುವಂತೆ ಮಾಡಿದೆ. ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ.