‘ವಕ್ಫ್ ರಾಷ್ಟ್ರೀಕರಣವಾಗಲಿ’; ಸಂಚಲನ ಸೃಷ್ಟಿಸಿದ ಯತ್ನಾಳ್ ಪತ್ರ..!

ಬೆಂಗಳೂರು: ರೈತರ ಜಮೀನು ವಕ್ಫ್ ಆಸ್ತಿ ಎಂಬಂತೆ ಬಿಂಬಿತವಾಗುತ್ತಿರುವ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನಿಗೆ ಬರೆದಿರುವ ಪತ್ರ ಗಮನಸೆಳೆದಿದೆ.

ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

“ದೇಶದಾದ್ಯಂತ ರೈತರ, ದೇವಸ್ಥಾನಗಳ, ಟ್ರಸ್ಟ್‌ಗಳ ಮತ್ತು ಮಠಗಳ ಜಮೀನುಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸುತ್ತಿರುವುದು ವಿಷಾದದ ಸಂಗತಿ. ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು” –ಯತ್ನಾಳ್ ಆಗ್ರಹ.

  ದೇಶದ ಎಲ್ಲಾ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ಹೀಗಿರುವಾಗ ವಕ್ಫ್‌ ಕೂಡಾ ಜಾತ್ಯತೀತ ರಾಷ್ಟ್ರದಲ್ಲಿ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಕಾರ್ಯನಿರ್ವಹಿಸಬೇಕಿದೆ ಎಂದು ಪ್ರತಿಪಾದಿಸಿರುವ ಯತ್ನಾಳ್, ದೇಶದ ಸಂಪನ್ಮೂಲ ಯಾವುದೇ ಸೀಮಿತ ಕೋಮಿಗೆ ಸೇರುವುದು ಜಾತ್ಯತೀತ ತತ್ವದ ವಿರುದ್ಧವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌

Related posts