ಬಿಜೆಪಿಯಲ್ಲಿನ ಬಣಬಡಿದಾಟದ ರೋಚಕತೆ: ಲಿಂಗಾಯತ ಶಕ್ತಿ ಯಾರ ಕಡೆ? ಬಿಎಸ್ವೈ ಗೆ ಅಗ್ನಿ ಪರೀಕ್ಷೆ

ಬೆಂಗಳೂರು: ರಾಜ್ಯ ಕಮಲ ಪಾಳಯದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಈ ವರೆಗೂ ಆಡಳಿತ ಪಕ್ಷದ ವಿರುದ್ಧ ರಣಕಹಳೆ ಮೊಳಗಿಸುತ್ತಿದ್ದ ಬಿಜೆಪಿಗರು ಇದೀಗ ತಮ್ಮ ಪಕ್ಷದೊಳಗೆ ಬಣ ಬಡಿದಾಟದಲ್ಲಿ ತೊಡಗಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜನರೆದುರು ಕೊಂಡೊಯ್ದು ಜಿಲ್ಲಾ-ತಾಲೂಕು ಪಂಚಾಯ್ತಿ ಚುನಾವಣೆಗೆ ರಣತಂತ್ರ ರೂಪಿಸಬೇಕಿದ್ದ ನಾಯಕರು ತಮ್ಮ ಬಣದ ಬಲಪ್ರದರ್ಶನಕ್ಕೆ ಮುಂದಾಗುವ ಅನಿವಾರ್ಯತೆ ಸೃಷ್ಟಿಯಾಗಿರುವುದು ರಾಜ್ಯ ರಾಜಕಾರಣದ ಅಚ್ಚರಿ.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬಣ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯೊಳಗಿನ ಕುಟುಂಬ ರಾಜಕಾರಣದ ವಿರುದ್ಧ ಸಮರ ಸಾರಿರುವ ಯತ್ನಾಳ್ ಬಣ ನಿರಂತರ ಚಟುವಟಿಕೆಗಳಲ್ಲಿ ತೊಡಗಿದೆ. ಇದೇ ವೇಳೆ ಯತ್ನಾಳ್ ಬಣಕ್ಕೆ ಸೆಡ್ಡು ಹೊಡೆಯಲು ವಿಜಯೇಂದ್ರ ಬೆಂಬಲಿಗರು ನಡೆಸುತ್ತಿರುವ ಕಾರ್ಯತಂತ್ರವು ಪಕ್ಷವನ್ನೇ ಇಬ್ಬಾಗಕ್ಕೆ ಕಾರಣವಾಗುತ್ತಾ ಎಂಬ ಆತಂಕವನ್ನು ಹುಟ್ಟುಹಾಕಿದೆ.

ಯತ್ನಾಳ್ ಬಣಕ್ಕೆ ಸೆಡ್ಡುಹೊಡೆಯಲು ಮುಂದಾಗಿರುವ ವಿಜಯೇಂದ್ರ, ತಾನು ಲಿಂಗಾಯತ ನಾಯಕ, ‘ನಾನೇ ಪ್ರಬಲ ನಾಯಕ’ ಎಂದು ತೋರಿಸುವ ಪ್ರಯತ್ನದಲ್ಲಿದ್ದು, ಈ ಸಂಬಂಧ ತಮ್ಮ ಆಪ್ತ ರೇಣುಕಾಚಾರ್ಯ ಮೂಲಕ ರಹಸ್ಯ ಕಸರತ್ತಿನಲ್ಲಿ ನಿರತರಾಗಿದ್ದಾರೆ. ಮಾರ್ಚ್ 4ರಂದು ವೀರಶೈವ, ಲಿಂಗಾಯತ ಮುಖಂಡರ ಸಭೆ ನಡೆಸಿ ಯಡಿಯೂರಪ್ಪ ಬಲ ಪ್ರದರ್ಶನ ಮಾಡಲು ವೇದಿಕೆ ಸಿದ್ದಪಡಿಸಿದ್ದಾರೆ.

ಈ ಕುರಿತಂತೆ BSY ಆಪ್ತ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಶುಕ್ರವಾರ ಮಾಹಿತಿ ಹಂಚಿಕೊಂಡ ವೈಖರಿ ಬಿಜೆಪಿಯೊಳಗಿನ ಕುತೂಹಲಕಾರಿ ಸನ್ನಿವೇಶಗಳನ್ನು ತೆರೆದಿಟ್ಟಂತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಖಾತೆ ತೆರೆಯುವಂತಾಗಲು ಹಗಲಿರುಳು ಪಕ್ಷಕ್ಕಾಗಿ ದುಡಿದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಬಗ್ಗೆ ಕೆಲ ಬಿಜೆಪಿ ಮುಖಂಡರು ಬಹಳ ಹೀನಾಯವಾಗಿ ಮಾತನಾಡುತಿದ್ದು, ಅವರಿಗೆ ಬಿ.ಎಸ್.ಯಡಿಯೂರಪ್ಪನವರ ಬಲ ಏನು ಎಂಬುದನ್ನು ತೋರಿಸುವ ಸಲುವಾಗಿ ಮಾರ್ಚ್ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಳೆ ಮೈಸೂರು ಪ್ರಾಂತದ ವೀರಶೈವ, ಲಿಂಗಾಯಿತ ಮುಖಂಡ ಸಭೆ ಕೆರೆಯಲಾಗಿದೆ ಎಂದು ಮಾಜಿ ಸಚಿವರೂ ಆದ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯಿತ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ರೇಣುಕಾಚಾರ್ಯ, ಯಡಿಯೂರಪ್ಪನವರ ಬಲ ಪ್ರದರ್ಶನದ ಈ ಸಭೆಗೆ ‘ವೀರಶೈವ ಲಿಂಗಾಯಿತ ಮಹಾ ಸಂಗಮ’ ಎಂದು ಹೆಸರಿಡಲಾಗಿದೆ. ಹಳೆ ಮೈಸೂರು ಭಾಗಕ್ಕೆ ಸೇರಿದ ಎಲ್ಲಾ ಜಿಲ್ಲೆಗಳ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡು ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಹಾಗಾಗಿ ಈ ಭಾಗದ ಎಲ್ಲಾ ವೀರಶೈವ, ಲಿಂಗಾಯಿತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ, ಯಡಿಯೂರಪ್ಪ ಮತ್ತು ವಿಜಯೇಂದ್ರರ ಕೈ ಬಲಪಡಿಸುವಂತೆ ಮನವಿ ಮಾಡಿದ್ದಾರೆ. .

ಯಡಿಯೂರಪ್ಪ ಕುಟುಂಬದ ವಿರುದ್ದ ಯತ್ನಾಳ್ ಮತ್ತು ಕೆಲ ನಡೆಯದ ನಾಣ್ಯಗಳು ಕಳೆದ ನಾಲ್ಕು ತಿಂಗಳಿನಿಂದ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುತ್ತಿವೆ ಎಂದು ಟೀಕಿಸಿರುವ ರೇಣುಕಾಚಾರ್ಯ, ‘ಯಡಿಯೂರಪ್ಪ ಲಿಂಗಾಯಿತ ನಾಯಕರೇ ಅಲ್ಲ. ಅವರ ಕುಟುಂಬದ ಹಿಂದೆ ಯಾವ ವೀರಶೈವರು ಇಲ್ಲ’ ಎಂಬ ಕ್ಷುಲ್ಲಕ ಹೇಳಿಕೆಗಳನ್ನು ಯತ್ನಾಳ್ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಶಕ್ತಿ ಏನು ಎಂದು ತೋರಿಸುವ ಸಲುವಾಗಿಯೇ ಈ ‘ವೀರಶೈವ, ಲಿಂಗಾಯಿತ ಮಹಾಸಂಗಮ’ ಆಯೋಜಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Related posts