ಬೆಂಗಳೂರು: ಇದೀಗ ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ. ಇದರ ಅಸಲಿ ಕಾರಣ ಬಗ್ಗೆ ಚರ್ಚೆಗಳು ಸಾಗಿದೆ. ಕೊರೋನಾ ನೆಪದಲ್ಲಿ ಬಂದ್ ಆಗಿರುವ ಇಂದಿರಾ ಕ್ಯಾಂಟೀನ್ ಮತ್ತೆ ಆರಂಭವಾಗುವುದಿಲ್ಲವೇ ಎಂಬ ಆತಂಕವೂ ಹಲವರದ್ದು. ಆದರೆ ಇದರ ಅಸಲಿ ಕಾರಣವೇ ಬೇರೆ. ಯಾವುದೇ ಆತಂಕ ಬೇಡ ಅಂತಿದ್ದಾರೆ ಅಧಿಕಾರಿಗಳು.
ಕೊರೋನಾ ವೈರಸ್’ನಿಂದಾಗಿ ರಾಜ್ಯದ ಜನ ಹೈರಾಣಾಗಿದ್ದು, ಇದೀಗ ಲಾಕ್ ಡೌನ್ ವ್ಯವಸ್ಥೆ ಕೂಡಾ ಕಂಗಾಲಾಗಿಸಿದೆ. ಇದೆ ಹೋಟೆಲ್, ಕ್ಯಾಂಟೀನ್, ಬೇಕರಿಗಳೂ ಬಂದ್ ಆಗಿರುವುದರಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.
ಮಾರ್ಚ್ 31ರವರೆಗೂ ಇಡೀ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದಿರಾ ಕ್ಯಾಂಟೀನ್’ಗಳಲ್ಲಿ ಉಚಿತ ಊಟ ತಿಂಡಿ ನೀಡಲಾಗುವುದೆಂದು ಘೋಷಿಸಿದ್ದರು. ಆದರೆ ಘೋಷಿಸಿದ ಒಂದೇ ದಿನದಲ್ಲಿ ಇಂದಿರಾ ಕ್ಯಾಂಟೀನನ್ನೇ ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನನ್ನು ಬಿ.ಎಸ್.ವೈ. ಸರ್ಕಾರ ಮುಚ್ಚುವ ಪ್ರಯತ್ನಕ್ಕಿಳಿದಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಅಸಲಿ ಕಾರಣವೇ ಬೇರೆ ಇದೆ.
ಬಡವರ ಪಾಲಿಗೆ ವರದಾನವಾಗಿರುವ ಇಂದಿರಾ ಕ್ಯಾಂಟೀನಲ್ಲಿ 10 ರುಪಾಯಿಗೆ ಒಪ್ಪೊತ್ತಿನ ಊಟ ಸಿಗುತ್ತಿತ್ತು. ಬೆಳಿಗ್ಗಿನ ಉಪಹಾರವೂ ಲಭ್ಯವಿತ್ತು. ಆದರೆ ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಸರ್ಕಾರ ಇಂದಿರಾ ಕ್ಯಾಂಟೀನಿಗೆ ಬೀಗ ಜಡಿದಿದೆ.
ಎಂದಿನ ದಿನಗಳಲ್ಲಿ ಹೋಟೆಲ್ ಹಾಗೂ ಇತರೆ ಕ್ಯಾಂಟೀನ್’ಗಳು ತೆರೆದಿರುತ್ತವೆ. ಹಾಗಾಗಿ ಜನರು ಬೇರೆ ಬೇರೆ ಕಡೆ ಹಂಚಿ ಹೋಗುತ್ತಾರೆ. ಆದರೆ ಇದೀಗ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಹೋಟೆಲ್ ಹಾಗೂ ಇನ್ನಿತರೇ ಆಹಾರ ತಾಣಗಳು ಮುಚ್ಚಿರುವುದರಿಂದಾಗಿ ಎಲ್ಲರೂ ಇಂದಿರಾ ಕ್ಯಾಂಟೀನ್’ನತ್ತ ಕೇಂದ್ರೀಕೃತರಾಗಿದ್ದಾರೆ. ಅದರಲ್ಲೂ ಉಚಿತ ಊಟ ಸಿಗುತ್ತಿರುವುದರಿಂದಾಗಿ ಜನ ಮುಗಿಬೀಳುತ್ತಿದ್ದರು. ಸಾವಿರಾರು ಜನ ಒಂದೇ ಕಡೆ ಜಮಾಯಿಸುವುದರಿಂದ ಸೋಂಕು ಹರಡುವ ಆತಂಕ ಎದುರಾಯಿತು. ಈ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದಿರಾ ಕ್ಯಾಂಟೀನನ್ನು ಮುಚ್ಚಲಾಗಿದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.