ಬೆಂಗಳೂರು: ಮಾಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್ ಸೇವೆ ಮತ್ತೆ ಆರಂಭಗೊಂಡಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅಗತ್ಯ ಸೇವೆಯಲ್ಲಿ ತೊಡಗಿರುವ ಮಂದಿಗೆ ಅನುಕೂಲವಾಗಲೆಂದು ಸಾರಿಗೆ ನಿಗಮದ ಕೆಲವೇ ಬಸ್ಸುಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳು ತನ್ನ ಸಂಚಾರವನ್ನು ಆರಂಭಿಸಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ. ಸುಮಾರು 180 ಬಸ್ ಗಳು ಸಂಚಾರ ಆರಂಭಿಸಿದೆ. ಸೋಂಕು ತಡೆ ಸಂಬಂಧ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಪ್ರತೀ ಬಸ್ ನಲ್ಲಿ 20 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಅಗತ್ಯ ಸೇವೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವ ನೌಕರರು, ಮೂಲ ಸೌಲಭ್ಯ ಒದಗಿಸುವ ಇಲಾಖೆಗಳ ಸಿಬ್ಬಂದಿ, ಬ್ಯಾಂಕ್ ನೌಕರರು, ಅಧಿಕಾರಿಗಳು, ಭದ್ರತಾ ವಲಯದಲ್ಲೂ ಕೆಲಸ ಮಾಡುವವರಿಗಾಗಿ ಹಾಗೂ ರಕ್ತ ದಾನಿಗಳು ಈ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಯಾಣಿಕರು ಪೊಲೀಸ್ ಇಲಾಖೆ ನೀಡುವ ಕರ್ಫ್ಯೂ ಪಾಸ್ ಹೊಂದಿದ್ದರೆ ಮಾತ್ರ ಬಸ್ ಹತ್ತಲು ಅವಕಾಶ ಇರುತ್ತದೆ.