ದೆಹಲಿ: ಜಗತ್ತಿನಾದ್ಯಂತ ಸಾವಿನ ಸರಣಿಯನ್ನು ಮುಂದುವರಿಸಿರುವ ಕೊರೋನಾ ಮಹಾಮಾರಿ ವೈರಸ್ ಇದೀಗ ಭಾರತದಲ್ಲೂ ಮರಣ ಮೃದಂಗ ಭಾರಿಸುತ್ತಿದೆ. ಯುಗಾದಿ ಸಂಭ್ರಮದಲ್ಲಿರಬೇಕಾದ ಭಾರತ ಇದೀಗ ಕೊರೋನಾ ಸೋಂಕಿನಿಂದಾಗಿ ಸೂತಕದ ನೆರಳಲ್ಲಿರಬೇಕಾಗಿದೆ.
ಕೋವಿಡ್-19 ಸೋಂಕು ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ. ಶ್ರೀನಗರದ ದಾಲ್ ಗೇಟ್ ನ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಗುಜರಾತಿನಲ್ಲೂ ಮಹಿಳೆಯೊಬ್ಬರು ಕೊರೋನಾ ಸೋಂಕಿಗೊಳಗಾಗಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಸೌದಿ ಅರೇಬಿಯಾದಿಂದ ವಾಪಸಾಗಿದ್ದ ಸುಮಾರು 85 ವರ್ಷ ವಯಸ್ಸಿನ ಗುಜರಾತಿನ ಮಹಿಳೆ ವೈರಸ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಕೋವಿಡ್-19 ಸೋಂಕಿಗೊಳಗಾದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಲಾಕ್ ಡೌನ್ ಜಾರಿಯ ನಡುವೆಯೂ 70 ಹೊಸ ಪ್ರಕರಣಗಳು ದೃಢಪಟ್ಟಿದೆ. ದೆಹಲಿಯ ಕ್ಲಿನಿಕ್‌ವೊಂದರ ವೈದ್ಯನ ಇಡೀ ಕುಟುಂಬಕ್ಕೆ ಕೊರೊನಾ ವೈರಸ್ ಅಂಟಿಕೊಂಡಿದೆ. ದೆಹಲಿಯ ಮೌಜ್‌ಪುರ್ ಪ್ರದೇಶದದಲ್ಲಿ ಮೊಹಲ್ಲಾ ಕ್ಲಿನಿಕ್‌ನ ವೈದ್ಯರು, ಅವರ ಪತ್ನಿ ಹಾಗೂ ಪುತ್ರಿ ಕೊರೊನಾ ವೈರಸ್ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ಭಾರತದಲ್ಲಿ ಬುಧವಾರ ಕೋವಿಡ್-19 ವೈರಸ್ ನ 101 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹಾಮಾರಿ ಕೊರೋನಾ ವೈರಸ್ ದಾಳಿಗೊಳಗಾದವರ ಸಂಖ್ಯೆ 625 ದಾಟಿದೆ.