ಬೆಂಗಳೂರು: ಕೊರೋನಾ ವೈರಸ್ ದೇಶಾದ್ಯಂತ ರುದ್ರ ತಾಂಡವವಾಡುತ್ತಿದೆ. ಈಗಾಗಲೇ ಸೋಕಿತರ ಸಂಖ್ಯೆ ಒಂದು ಸಾವಿರ ದಾಟಿದ್ದು, ಸಾಯುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ ಭಾರತೀಯರು ಕೂಡಾ ಸೇಫ್ ಅಲ್ಲ ಎನ್ನುವಂತಾಗಿದೆ.
ಈ ನಡುವೆ ರಾಜ್ಯದಲ್ಲೂ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನ ಮಾತ್ರ ಇನ್ನೂ ಕೂಡಾ ಪರಿಸ್ಥಿತಿಯನ್ನು ಗಂಭೀತವಾಗಿ ಪರಿಗಣಿಸಿದಂತಿಲ್ಲ. ಬೆಂಗಳೂರು, ಮಂಗಳೂರು, ಮೈಸೂರು ಸಹಿತ ನಗರ ಪ್ರದೇಶಗಳಲ್ಲಿ ಜನರು ನಿಯಮ ಮೀರಿ ಸಂಚರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲೂ ನೂಕು ನುಗ್ಗಲು ಸನ್ನಿವೇಶ ಕಂಡುಬರುತ್ತಿದೆ. ಜನರು ಪೊಲೀಸರ ಆದೇಶಕ್ಕೂ ಜಗ್ಗುತ್ತಿಲ್ಲ, ಲಾಠಿ ಏಟಿಗೂ ಬಗ್ಗುತ್ತಿಲ್ಲ.
ಸಪೋರ್ಟ್ ಬಿ.ಎಸ್.ವೈ
ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಗುವ ಮುನ್ನವೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ಲಾಕ್ ಡೌನ್ ಆದೇಶಿಸಿ ಮುಂದಾಲೋಚನೆ ಪ್ರದರ್ಶಿಸಿದ್ದರು. ಆ ತಕ್ಷಣದಿಂದಲೇ ರಾಜ್ಯವ್ಯಾಪಿ ಕರ್ಫ್ಯೂ ಸನ್ನಿವೇಶ ಕಂಡುಬಂತು. ಹಲವಾರು ಸಂಘ-ಸಂಸ್ಥೆಗಳೂ ‘ವಿ ಸಪೋರ್ಟ್ ಯಡಿಯೂರಪ್ಪ’ ಎನ್ನುತ್ತಾ ಸರ್ಕಾರದ ಪರವಾಗಿ ಅಭಿಯಾನ ನಿರತವಾಗಿವೆ. ಆದರೆ ಕೆಲವು ಕಡೆ ಜನರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ಓಡಾಡುತ್ತಿದ್ದಾರೆ.
ಈ ಮಧ್ಯೆ, ರಾಜ್ಯದಲ್ಲಿ ಲಾಕ್ ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ನಡುವಿನ ಸಮಾಲೋಚನೆ ವೇಳೆ, ಪರಿಸ್ಥಿತಿ ನಿಯಂತ್ರಣದ ಸಲುವಾಗಿ ಸೇನೆಯನ್ನು ನಿಯೋಜಿಸುವ ಬಗ್ಗೆ ಚರ್ಚೆ ನಡೆದಿದೆಯೆನ್ನಲಾಗಿದೆ. ಈ ವರೆಗೂ ಪೊಲೀಸರೇ ಹಾದಿ-ಬೀದಿಯಲ್ಲಿ ಜನರಿಗೆ ನೀತಿ ಪಾಠ ಹೇಳುತ್ತಿದ್ದರು. ಅವರ ಮಾತಿಗೆ ಕ್ಯಾರೇ ಅನ್ನದ ಮಂದಿ ಸೋಮವಾರದಿಂದ ಸೇನೆಯ ಪ್ರಹಾರದ ರುಚಿ ಸವಿಯಬೇಕಾಗುತ್ತೆ.
ಅರೆಸೇನೆ ಆಗಮನ?
ರಾಜ್ಯದಲ್ಲಿ ನಾಳೆಯಿಂದ ಅರೆಸೇನಾ ಪಡೆ ಕಾರ್ಯಾಚರಣೆಗಿಳಿಯಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲೂ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರೆಸೇನಾ ಪಡೆ ರಾಜ್ಯದ ಪ್ರಮುಖ ನಗರಗಳನ್ನು ತನ್ನ ಸುಪರ್ದಿಗೆ ಪಡೆಯುವ ಸಾಧ್ಯತೆಗಳಿವೆ. ಪ್ರಮುಖವಾಗಿ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳು ಹಾಗೂ ಮಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಸಹಿತ ಕೊರೋನಾ ಸೋಂಕು ಪತ್ತೆಯಾಗಿರುವ ಪ್ರದೇಶಗಳಲ್ಲಿ ಅರೆಸೇನಾ ಪಡೆ ಯೋಧರೇ ಲಾಕ್ ಡೌನ್ ಪರಿಸ್ಥಿತಿಯನ್ನು ನಿಭಾಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.