ಒಂದು ವಾರದೊಳಗೆ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಗ್ರಿಡ್ ವ್ಯವಸ್ಥೆ

ವಕೀಲರ ಸಂಘಕ್ಕೆ 5 ಕೋಟಿ ರೂ. ಅನುದಾನ ಪ್ರಕಟಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಂಪೇಗೌಡ ಜಯಂತಿಗೆ ವಾರ್ಷಿಕ ರೂ. 5 ಲಕ್ಷ ಮೀಸಲು ಇದೆ ಎಂದು ಪ್ರಕಟಿಸಿದ್ದಾರೆ. ಒಂದು ವಾರದೊಳಗೆ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಗ್ರಿಡ್ ವ್ಯವಸ್ಥೆ ಒದಗಿಸಲು ಪರಿಶೀಲನೆ ನಡೆಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ಆವರಣದಲ್ಲಿ ಶುಕ್ರವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಡಿಕೆಶಿ, ವಕೀಲರ ಬೇಡಿಕೆಗಳಿಗೆ ಸ್ಪಂಧಿಸುವ ಭರವಸೆ ನೀಡಿದರು.

ಒಂದು ವಾರದೊಳಗೆ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಗ್ರಿಡ್ ವ್ಯವಸ್ಥೆ ಒದಗಿಸಲು ಪರಿಶೀಲನೆ ನಡೆಸಲಾಗುವುದು. ಇದರ ಬಗ್ಗೆ ಹಿಂದೆಯೇ ಮಾತುಕತೆಯಾಗಿತ್ತು. ನೀವು ಅಧಿಕಾರಿಗಳ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳಬೇಕು. ಜೊತೆಗೆ ಈ ಸಂಸ್ಥೆಗೆ ಭೂಮಿ ಬೇಕು ಎಂದು ಹೇಳಿದ್ದೀರಿ. ಆದ ಕಾರಣಕ್ಕೆ 10 ಎಕರೆ ಕಂದಾಯ ಭೂಮಿಯನ್ನು ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೇ ಹುಡುಕಿ. ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ ಎಂದವರು ವಕೀಲರ ಸಂಘಕ್ಕೆ ಸಲಹೆ ನೀಡಿದರು.

ಉದಾರ ಮನಸ್ಸಿನಿಂದ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು. ನಮ್ಮ ಮೂಲವನ್ನು ಮರೆತರೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ನಾವು ನಾಲ್ಕು ʼಕೆʼಗಳನ್ನು ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರು, ಕನ್ನಡ ಸಾಹಿತ್ಯವನ್ನು ಬೆಳಗಿ, ನಾಡಗೀತೆ ಬರೆದ ಕುವೆಂಪು ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ ಕೃಷ್ಣ ಅವರು ಎಂದು ಡಿಕೆಶಿ ನೆನಪಿಸಿದರು.

ಬೆಂಗಳೂರಿನ ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದ್ದು, ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು.

Related posts