ಸಮೀಕ್ಷೆಯ ನೆಪದಲ್ಲಿ ಜಾತಿ-ಉಪ ಜಾತಿ ಹೆಸರಲ್ಲಿ ಸಮಾಜ ಒಡೆಯುವ ನೀಚತನ; ವಿಜಯೇಂದ್ರ ಆಕ್ರೋಶ

ಬೆಂಗಳೂರು: ಕರಡು ಜಾತಿ ಪಟ್ಟಿಯಿಂದ ಕ್ರಿಶ್ಚಿಯನ್ ಉಪಜಾತಿಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ, ಬಿಜೆಪಿ ನಾಯಕರ ನಿಯೋಗವು ಮಂಗಳವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ಬ್ಯಾನರ್ ಅಡಿಯಲ್ಲಿ ಬಿಜೆಪಿ ಆಯೋಜಿಸಿದ್ದ ದುಂಡುಮೇಜು ಸಭೆಯಲ್ಲಿ, ಜಾತಿ ಜನಗಣತಿ (ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಸಮೀಕ್ಷೆ) ಕುರಿತು ಏಳು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ. ಸೋಮಣ್ಣ, ಜೊತೆಗೆ ಪ್ರಭಾಕರ್ ಕೋರೆ, ವಿಜಯ್ ಸಂಕೇಶ್ವರ್ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಪಾಲ್ಗೊಂಡಿದ್ದರು.

ಸಭೆಯ ನಿರ್ಣಯ ಪ್ರಕಾರ, ಮತಾಂತರಗೊಂಡವರಿಗೆ ಮೀಸಲು ನೀಡಲಾದ ಉಪಜಾತಿ ಸಂಕೇತಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಲಿಂಗಾಯತ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಸೇರಿ ಒಟ್ಟು 47 ಉಪಜಾತಿಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಲಾಯಿತು.

“ಈ ಉಪಜಾತಿಗಳನ್ನು ಸೇರಿಸುವುದರಿಂದ ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಇದು ಸಂವಿಧಾನಬಾಹಿರ. ಸರ್ಕಾರ ಪ್ರಾಯೋಜಿತ ಸಮೀಕ್ಷೆಯು ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತದೆ” ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಸಮೀಕ್ಷೆಯನ್ನು ತ್ವರಿತವಾಗಿ ನಡೆಸಬಾರದು, ಬೇಸಿಗೆಯಲ್ಲಿ ನಡೆಸಬಹುದು ಎಂದು ನಿಯೋಗ ಸರ್ಕಾರಕ್ಕೆ ಸಲಹೆ ನೀಡಿದೆ. ಮತಾಂತರಗೊಂಡವರಿಗೆ ಮೀಸಲು ಸೌಲಭ್ಯಗಳು ಅನರ್ಹವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಬೇಕು ಎಂದು ಬಿಜೆಪಿ ನಿಯೋಗ ಆಗ್ರಹಿಸಿದೆ.

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್, “ಕ್ರೈಸ್ತ ಧರ್ಮದ ಅಡಿಯಲ್ಲಿ ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಸೇರಿ 46ಕ್ಕೂ ಹೆಚ್ಚು ಜಾತಿಗಳನ್ನು ದಾಖಲಿಸಲಾಗಿದೆ. ಇದರ ಅಗತ್ಯವಿಲ್ಲ. ಇದು ಗೊಂದಲಕ್ಕೆ ಕಾರಣವಾಗುವುದು, ಮತಾಂತರಕ್ಕೆ ಉತ್ತೇಜನ ನೀಡುವುದು” ಎಂದು ಕಳವಳ ವ್ಯಕ್ತಪಡಿಸಿದರು.

“ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯಪಾಲರು ಭರವಸೆ ನೀಡಿದರೆಂದು ಒಡೆಯರ್ ತಿಳಿಸಿದರು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯದ ಮೊರೆ ಹೋಗುವ ಜೊತೆಗೆ ಆಂದೋಲನ ಆರಂಭಿಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

Related posts