ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಮೂರು ಆಯುಕ್ತರ ಹುದ್ದೆಗಳಿಗೆ ರಾಜ್ಯ ಸರ್ಕಾರ ನೇಮಕ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ್ ವಾಳ್ವೇಕರ್ ಆಯೋಗದ ಬೆಂಗಳೂರು ಪೀಠಗಳಿಗೆ ಕಮೀಷನರ್ ಆಗಿ ಸರ್ಕಾರ ನೇಮಕ ಮಾಡಿದೆ. ಕಲಬುರಗಿ ಪೀಠಕ್ಕೆ ಬಿ.ವೆಂಕಟ್ ಸಿಂಗ್ ಅವರನ್ನು ಆಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ ರವರು ಭಾರತೀಯ ಆಡಳಿತ ಸೇವೆ ಅಧಿಕಾರಿಯಾಗಿ, ವಿವಿಧ ಆಡಳಿತ, ವ್ಯವಸ್ಥಾಪಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ರಸ್ತೆ ಸುರಕ್ಷತೆ, ಸಾರ್ವಜನಿಕ ಕಲ್ಯಾಣ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಮಾಡಿರುವ ಸಾಧನೆ ಹೆಗ್ಗುರುತಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ನಂತರ, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ವ್ಯವಹಾರ ಆಡಳಿತದಲ್ಲಿ MBA ಶಿಕ್ಷಣ ಪಡೆದಿದ್ದಾರೆ. “ರಸ್ತೆ ಸುರಕ್ಷತಾ ನಿರ್ವಹಣೆಗಾಗಿ ಚಾಲಕರ ವರ್ತನೆಗಳು ಮತ್ತು ಅಪಾಯ ತೆಗೆದುಕೊಳ್ಳುವ ನಡವಳಿಕೆಯ ಕುರಿತು ಅಧ್ಯಯನ”, ಚಾಲಕ ನಡವಳಿಕೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ. ಪಡೆದಿದ್ದಾರೆ.

ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ, ಬಿಬಿಎಂಪಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಬಿಬಿಎಂಪಿ ಜಂಟಿ ಆಯುಕ್ತ, ಕೊಡಗು ಜಿಲ್ಲೆಯಲ್ಲಿ ಉಪ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಹಟ್ಟಿ ಚಿನ್ನದ ಗಣಿಗಳ ಕಂಪನಿಯಾ ವ್ಯವಸ್ಥಾಪಕ ನಿರ್ದೇಶಕರಾಗಿ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಾಗಿ, ಕರ್ನಾಟಕ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ (ಗಣಿ, MSME, ಸಕ್ಕರೆ ಮತ್ತು ಜವಳಿ) ಕಾರ್ಯದರ್ಶಿಯಾಗಿ, ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
BBMP ಜಂಟಿ ಆಯುಕ್ತರಾಗಿದ್ದಾಗ BBMP ವಲಯಗಳು ಮತ್ತು ನಗರ ಭೂ ವಿಷಯಗಳಲ್ಲಿ ಕಸ ನಿರ್ವಹಣಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭೂ ವಿಷಯಗಳಲ್ಲಿ ನ್ಯಾಯಾಲಯ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿ ಸರ್ಕಾರೀ ಸ್ವತ್ತನ್ನು ಉಳಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಕೊಡಗಿನಲ್ಲಿ ಉಪ ಆಯುಕ್ತರಾಗಿದ್ದ ಅವಧಿಯಲ್ಲಿ 528 ಬುಡಕಟ್ಟು ಕುಟುಂಬಗಳಿಗೆ ವಸತಿ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ಆಗ ಸಾವಿರಾರು ಜನರಿಗೆ ಮನೆಗಳ ನಿರ್ಮಾಣಕ್ಕೆ ನೀಡಿದ ಕೊಡುಗೆ ಸಾರ್ವಜನಿಕವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಏರೋ ಎಂಜಿನಿಯರ್ ಆಗಿದ್ದಾಗ ಲಘು ಯುದ್ಧ ವಿಮಾನ ಯೋಜನೆಯಲ್ಲಿ ಮಾಡಿರುವ ಕೆಲಸ ಮೂಲಕ ಕೇಂದ್ರ ಸರ್ಕಾರದಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು. ಭಾರತದ ಪ್ರತಿಷ್ಠಿತ ವೈಮಾನಿಕ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ, ತಾಂತ್ರಿಕ ಪರಿಣತಿ ಜೊತೆಗೆ ಲಘು ಯುದ್ಧ ವಿಮಾನಗಳ (ಥೇಜಸ್) ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾರವರನ್ನು ಸರ್ಕಾರ ಕರ್ನಾಟಕ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿದೆ.