ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿಗಳು ಸಾರ್ವಜನಿಕರನ್ನು ಯಾವ ರೀತಿ ಹೀನಾಯವಾಗಿ ಕಾಣುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳ ವಿರುದ್ಧ ಹೋರಾಟ ನಡೆಸಿ ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಹಾಗೂ ಹಿಂದಿನ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲು ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಸಚಿವ ಪ್ರಿಯಾಂಕ್ ಖರ್ಗೆಯವರು ಇದೀಗ ತಮ್ಮ ಇಲಾಖೆಯ ಅಧಿಕಾರಿಯ ಕರ್ತವ್ಯಲೋಪ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದೇ ಕುತೂಹಲದ ವಿಷಯ.
ಈ ಸರ್ಕಾರದ ಅವಧಿಯಲ್ಲೂ ಅಧಿಕಾರಿಗಳ ದೌಲತ್ತು, ಕರ್ತವ್ಯಲೋಪಗಳು ಸಾರ್ವಜನಿಕರಿಗೆ ಸವಾಲಾಗಿದೆ ಎಂಬುದಕ್ಕೆ ದಾವಣಗೆರೆಯಲ್ಲಿ ನಡೆದಿರುವ ಈ ಪ್ರಕರಣ ಸಾಕ್ಷಿಯಾಗಿದೆ. ಬೆಂಗಳೂರಿನ ಆಲ್ವಿನ್ ಎಂ ಎಂಬವರು ಸಲ್ಲಿಸಿದ್ದ ಮಾಹಿತಿ ಹಕ್ಕು ಮೇಲ್ಮನವಿಯೊಂದರ ವಿಚಾರಣೆ ವೇಳೆ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವೃತ್ತದ ಅಧೀಕ್ಷಕ ಅಭಿಯಂತರ ಇಂದ್ರಕುಮಾರ್ ಅವರು ಮೇಲ್ಮನವಿ ಪ್ರತಿನಿಧಿ ಜೊತೆ ಹೀನಾಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮೇಲ್ಮನವಿ ಪ್ರಾಧಿಕಾರಿ ನಡೆಸುವ ವಿಚಾರಣೆಯು ನ್ಯಾಯಾಧಿಕರಣ ಸ್ವರೂಪದ ಕಲಾಪವಾಗಿದ್ದು, ನ್ಯಾಯಾಂಗಕ್ಕೆ ಅಪಚಾರವಾಗುವ ರೀತಿ ಈ ಅಧಿಕಾರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಆಲ್ವಿನ್ ಅವರು ಸಿಎಂ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಸಹಿತ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿರುವ ಜಲಜೀವನ್ ಮಿಷನ್ ಯೋಜನೆ ಕುರಿತಂತೆ ಆಲ್ವಿನ್ ಎಂಬವರು ಇಲಾಖೆಯ ದಾವಣಗೆರೆ ವೃತ್ತ ಕಚೇರಿಗೆ RTI ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತ ಮೇಲ್ಮನವಿ ವಿಚರಣೆಯನ್ನು ವ್ಯವಸ್ಥೆಗೆ ವಿರುದ್ಧವಾಗಿ ನಡೆಸಲಾಗಿದೆ, ವಿಚಾರಣೆ ವೇಳೆ, ಮೇಲ್ಮನವಿ ಪ್ರಾಧಿಕಾರಿ ಇಂದ್ರಕುಮಾರ್ ಅವರು ಅಪೀಲುದಾರ ಪ್ರತಿನಿಧಿಯನ್ನು ಏಕವಚನದಲ್ಲಿ ನಿಂದಿಸಿದ್ದಾರೆ, ಮಾಹಿತಿ ಹಕ್ಕು ಕಾಯ್ದೆಗೆ ವಿರುದ್ಧವಾಗಿ ಕಚೇರಿ ಅವಧಿ ಮುಗಿದ ನಂತರ ರಾತ್ರಿ ವೇಳೆ ವಿಚಾರಣೆ ನಡೆಸಿದ್ದಾರೆ ಎಂಬುದು ಆರೋಪ.
ಮೇಲ್ಮನವಿ ವಿಚಾರಣೆಗೆಂದೇ ಒಂದು ದಿನವನ್ನು ಮೀಸಲಿಡಬೇಕೆಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ ಈ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರಿ ಇಂದ್ರಕುಮಾರ್ ಅವರು 31.10.2025ರಂದು ಸಂಜೆ 5 ಗಂಟೆಗೆ ನಿಗದಿಗೊಳಿಸಿ ಅಪೀಲುದಾರರಿಗೆ ನೋಟೀಸ್ ನೀಡಿದ್ದರು. ಅಂದು ನಿಗದಿತ ಮೇಲ್ಮನವಿ ವಿಚಾರಣೆ ನಡೆಸದೆ, ಕಚೇರಿ ಅವಧಿ ಮುಗಿದ ನಂತರವೂ ತಮ್ಮ ಅಧೀನ ಅಧಿಕಾರಿಗಳ ಜೊತೆ ಅಧಿಕಾರಿ ಇಂದ್ರಕುಮಾರ್ ಕಾಲಹರಣ ಮಾಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಕಚೇರಿ ಅವಧಿ ಮುಗಿಯುತ್ತಿದ್ದಂತೆಯೇ ಸಂಜೆ 5.30ರ ಸುಮಾರಿಗೆ ಅಪೀಲುದಾರರು ತಮ್ಮ ಲಿಖಿತ ಹೇಳಿಕೆಯನ್ನು ಟಪ್ಪಾಲ್ ವಿಭಾಗದಲ್ಲಿ ನೀಡಿ ಕಚೇರಿಯಿಂದ ನಿರ್ಗಮಿಸಿದ್ದಾರೆ.
ಈ ಬೆಳವಣಿಗೆಯಿಂದ ಗಲಿಬಿಲಿಗೊಂಡ ಸೂಪರಿಂಟೆಂಡೆಂಟ್ ಇಂಜಿನೀಯರ್ ಇಂದ್ರಕುಮಾರ್ ತಮ್ಮ ಕಚೇರಿ ಸಿಬ್ಬಂದಿ ಮೂಲಕ ಅಪೀಲುದಾರರನ್ನು ಕರೆಸಿಕೊಂಡರು. ಕೊಠಡಿಯಲ್ಲಿ RTI ಮೇಲ್ಮನವಿಗೆ ಸಂಬಂಧವೇ ಇಲ್ಲದ ಸುಮಾರು 20-25 ಮಂದಿಯನ್ನು ಕೂರಿಸಿಕೊಂಡು ಅವರೆದುರು ಅಪೀಲುದಾರರನ್ನು ಏಕವಚನದಲ್ಲೇ ನಿಂದಿಸಿದ್ದಾರೆ ಎಂಬುದು ಆಲ್ವಿನ್ ಅವರ ಆರೋಪ. ಇದನ್ನು ಆಕ್ಷೇಪಿಸಿದ ಅಪೀಲುದಾರ ಪ್ರತಿನಿಧಿ, ಮೇಲ್ಮನವಿ ವಿಚಾರಣೆಯನ್ನು ಕಚೇರಿ ಅವಧಿ ಮುಗಿದ ನಂತರ, ರಾತ್ರಿ ಹೊತ್ತಲ್ಲಿ ನಡೆಸುವುದು ಸರಿಯಲ್ಲ. ಆದಾಗಿಯೂ ಬೆಂಗಳೂರಿನಿಂದ ಕರೆಸಿಕೊಂಡು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಗಮನಸೆಳೆದಿದ್ದಾರೆ.
ಅನಂತರ, ಮಾಹಿತಿ ಹಕ್ಕು ಅರ್ಜಿಯನ್ನು ಪರಿಶೀಲಿಸಿದ ಇಂದ್ರಕುಮಾರ್, ಅರ್ಜಿಯಲ್ಲಿ ಕೋರಿರುವ ವಿಷಯಗಳು ಸಮರ್ಪಕವಾಗಿದ್ದು, 7 ದಿನಗಳಲ್ಲಿ ದಾಖಲೆಗಳನ್ನು ಅರ್ಜಿದಾರರಿಗೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಅಷ್ಟರಲ್ಲೇ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ತಮ್ಮ ಕಚೇರಿಗೆ ಅರ್ಜಿಯೇ ಬಂದಿಲ್ಲ ಎಂದು ಹೇಳಿಕೆ ನೀಡಿ ಮೇಲ್ಮನವಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ವಿಚಾರಣೆಗೆ ನಾಟಕೀಯ ತಿರುವು ನೀಡಿದ್ದಾರೆ. ಆ ವೇಳೆ, ಸ್ಪಷ್ಟನೆ ನೀಡಿದ ಅಪೀಲುದಾರ ಪ್ರತಿನಿಧಿ, ‘ತಾವು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಅರ್ಜಿಯು ನಿಯಮಾನುಸಾರ ತಮ್ಮ ಇಲಾಖಾ ಕಚೇರಿಗೆ ವರ್ಗಾವಣೆಯಾಗಿದೆ. ಅದನ್ನು ಆಧರಿಸಿಯೇ ತಮ್ಮ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಿಂಬರಹವನ್ನೂ ನೀಡಿದ್ದು, ಆ ಹಿಂಬರಹವನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಪ್ರಕ್ರಿಯೆಗಳು ಅರ್ಜಿಯ ಮೇಲೆಯೇ ನಡೆದಿದೆ’ ಎಂದು ಗಮನಸೆದಿದ್ದಾರೆ. ಆದರೆ, ಆ ವರೆಗೂ ದಾಖಲೆಗಳನ್ನು ಒದಗಿಸಲು ಸೂಚಿಸುತ್ತಿದ್ದ ಇಂದ್ರಕುಮಾರ್, ದಿಢೀರನೆ ನಿಲುವು ಬದಲಿಸಿ, ‘ಅರ್ಜಿಯೇ ಸಲ್ಲಿಕೆಯಾಗಿಲ್ಲ’ ಎಂದು ಹಿಂಬರಹ ನೀಡಲು ಸೂಚಿಸಿ ಮೇಲ್ಮನವಿಯನ್ನು ಇತ್ಯರ್ಥಪಡಿಸಿರುವುದಾಗಿ ಪ್ರಕಟಿಸಿದ್ದಾರೆ.
ಜಗಜೀವನ್ ಮಿಷನ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಾಗಿ ಸಲ್ಲಿಸಿದ್ದ RTI ಅರ್ಜಿ ಮೇಲಿನ ವಿಚಾರಣೆ ಇದಾಗಿದ್ದರಿಂದ ಹಲವು ಪತ್ರಕತರೂ ಆ ಕಚೇರಿಯಲ್ಲಿ ಉಪಸ್ಥಿತರಿದ್ದು, ಬೆಳವಣಿಗೆಯನ್ನು ಎದುರು ನೋಡುತ್ತಿದ್ದರು. ಅವರ ಜೊತೆ ಚರ್ಚಿಸಿದ ಮೇಲ್ಮನವಿದಾರ ಆಲ್ವಿನ್ ಅವರು, ಆ ಕೂಡಲೇ ಸಿಎಂ ಸಿದ್ದರಾಮಯ್ಯ ಮತ್ತು ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ತಮ್ಮ ‘X’ ಖಾತೆಯ ಮೂಲಕ ದೂರು ನೀಡಿದ್ದಾರೆ.
ಈ ಬೆಳವಣಿಗೆಯಿಂದ ಗಲಿಬಿಲಿಗೊಂಡ ಅಧಿಕಾರಿ ಇಂದ್ರಕುಮಾರ್, ಅಂದು ರಾತ್ರೋ ರಾತ್ರಿ ಮತ್ತೊಂದು ನೋಟೀಸ್ ಸಿದ್ದಪಡಿಸಿ ‘ತಮ್ಮ ಕಚೇರಿಯಿಂದ ತಪ್ಪಾಗಿದೆ’ ಎಂದೂ ‘ತಮ್ಮ ಮೇಲ್ಮನವಿ ಬಗ್ಗೆ ಚರ್ಚೆಯಾಗಿಲ್ಲ, ಹಾಗಾಗಿ 10.11.2025ರಂದು ವಿಚಾರಣೆ ನಡೆಯಲಿದೆ’ ಎಂದು ತಿಳಿಸಿದ್ದಾರೆ. 31.10.2025ರಂದು ವಿಚಾರಣೆಗೆ ಹಾಜರಾಗಿದ್ದ ಅಪೀಲುದಾರರು ಅಂದು ರಾತ್ರಿವರೆಗೂ ತಮ್ಮ ಕಚೇರಿಯಲ್ಲೇ ಇದ್ದಿದ್ದರಿಂದ ಆಗಲೇ ಖುದ್ದಾಗಿ ಆ ನೋಟೀಸನ್ನು ನೀಡಬಹುದಾಗಿತ್ತು. ಆದರೆ ಅದನ್ನು ಅಂಚೆ ಮೂಲಕ ರವಾನಿಸಿರುವ ಅಧಿಕಾರಿ ಇಂದ್ರಕುಮಾರ್ ಅವರ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆಲ್ವಿನ್ ಹೇಳಿದ್ದಾರೆ.
ತಾವು ಈ ಸಂಬಂಧ ದಾಖಲೆಗಳೊಂದಿಗೆ ಸಿಎಂ ಹಾಗೂ ಇಲಾಖಾ ಸಚಿವರಿಗೆ ದೂರು ನೀಡಿದ್ದು, ತಪ್ಪಿತಸ್ಥ ಅಧಿಕಾರಿಯ ಕರ್ತವ್ಯ ಲೋಪ ಬಗ್ಗೆ ತನಿಖೆ ನಡೆಸಬೇಕು ಹಾಗೂ ನ್ಯಾಯಾಧಿಕರಣ ಸ್ವರೂಪದ ವಿಚಾರಣೆಗೆ ಬದಲಿ ಅಧಿಕಾರಿಯನ್ನು ನಿಯೋಜಿಸಬೇಕೆಂದು ಮನವಿ ಮಾಡಿರುವುದಾಗಿ ಅಲ್ವಿನ್ ತಿಳಿಸಿದ್ದಾರೆ.
