ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿರುವ ಆರೋಗ್ಯ ಸೇವಾಕರ್ತರು ಎಷ್ಟು ಸೇಫ್ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉದಾಹರಣೆಯಾಗಿದೆ ಬೆಂಗಳೂರಿನ ಸಾಧಿಕ್ ಪಾಲ್ಯಾದಲ್ಲಿ ಬುಧವಾರ ನಡೆದ ದೌರ್ಜನ್ಯದ ಘಟನೆ.
ಕೊರೋನಾ ನಿಯಂತ್ರಣಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತೆಯರು ಊರೂರು ತೆರಳಿ ಕೈಗೊಳ್ಳುತ್ತಿರುವ ಸೇವೆ ಗಮನಾರ್ಹ. ಆದರೆ ಇದೇ ಆಶಾ ಕಾರ್ಯಕರ್ತೆಯರಿಗೆ ಕೆಲವು ಕಿಡಿಗೇಡಿಗಳು ಕಿರುಕುಳ ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತರು ಕೊರೋನಾ ಸೈನಿಕರಾಗಿಯೂ ದುಡಿಯುತ್ತಿದ್ದಾರೆ. ಈ ತಂಡ ಊರು ಕೇರಿಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದು, ಬುಧವಾರ ಬೆಂಗಳೂರಿನ ಸಾರಾಯಿ ಪಾಳ್ಯದ ಸಾಧಿಕ್ ಲೇಔಟ್ ನಲ್ಲಿ ಸಮೀಕ್ಷೆಗೆ ನಡೆಸುತ್ತಿದ್ದಾಗ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನೆಗಡಿ, ಕೆಮ್ಮು, ಜ್ವರ ಕುರಿತು ಜನರಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಆಶಾ ಕಾರ್ಯಕರ್ತೆಯರನ್ನು ತಡೆದ ಯುವಕರ ಗುಂಪು ಅವರನ್ನು ನಿಂದಿಸಿ ಹಲ್ಲೆಗೆ ಮುಂದಾಗಿದೆ. ಅಷ್ಟೇ ಅಲ್ಲ, ಮೊಬೈಲ್ ಫೋನ್ ಕಸಿದುಕೊಂಡು ದುರ್ವರ್ತನೆ ತೋರಿದ್ದಾರೆ. ಈ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ, ಮೊಬೈಲ್ ಸಂಖ್ಯೆ ನೀಡದಂತೆ ಪ್ರಾರ್ಥನಾ ಮಂದಿರ ಬಳಿಯ ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆ ಬಗ್ಗೆ ವ್ಯಾಪಕ ಆರೋಶ ವ್ಯಕ್ತವಾಗಿದೆ. ಆಹಾ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂಆಕ್ರೋಶ ವ್ಯಕ್ತವಾಗಿದೆ.