ಭಲೇ ಭಾಸ್ಕರ ; ವಾಯು ವಿಹಾರವಲ್ಲ, ಕಾನೂನು ಪ್ರಹಾರ

ಬೆಂಗಳೂರು: ಕೊರೋನಾ ರೌದ್ರಾವತಾರ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಜನರು ರಸ್ತೆಗಿಳಿಯುತ್ತಿರುವ ಪ್ರಸಂಗಗಳಿಗೇನೂ ಕಮ್ಮಿಯಿಲ್ಲ. ಈ ಹಿಂದೆ ಪೊಲೀಸರು ಲಾಠಿ ರುಚಿ ತೋರಿಸಿ ಬೀದಿಯಲ್ಲಿದ್ದ ಜನರನ್ನು ಮನೆಯೊಳಗೇ ಅಟ್ಟುತ್ತಿದ್ದರು. ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಪರ್ಯಾಯ ಕ್ರಮಗಳ ಮೂಲಕ ಬೀದಿಯಲ್ಲಿ ಸಂಚರಿಸುವ ಮಂದಿಗೆ ಮನವರಿಕೆ ಮಾಡುವ ಪ್ರಯತ್ನಕ್ಕಿಳಿದಿದ್ದಾರೆ ಪೊಲೀಸರು. ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ಪ್ರಕರಣ ದಾಖಲಿಸಿ ವಾಹನವನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರೂ ಅನೇಕರು ಕ್ಯಾರೇ ಅನ್ನುತ್ತಿಲ್ಲ.

ಈ ಪರಿಸ್ಥಿತಿಯಿಂದ ಸಿಡಿಮಿಡಿಗೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮಾರುವೇಷದಲ್ಲಿ ಬೀದಿಗಿಳಿದಿದ್ದಾರೆ. ಉದ್ಯಾನ ನಗರಿಯಲ್ಲಿ ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ ರೀತಿಯಲ್ಲಿ ಪೊಲೀಸ್ ಪಡೆಯ ಮಧ್ಯೆ ಹಾಜರಾದ ಭಾಸ್ಕರ್ ರಾವ್, ತಾವೇ ಮುಂದೆ ನಿಂತು ವಾಹನಗಳನ್ನು ತಡೆಯುತ್ತಿದ್ದರು. ಪೊಲೀಸ್ ಪಾಸ್’ಗಳು ಮಿಸ್‌ಯೂಸ್ ಆಗುತ್ತಿರುವ ಬಗ್ಗೆ ಕಣ್ಣಾರೆ ಕಂಡ ಕಮೀಷನರ್ ಹಲವರಿಗೆ ಎಚ್ಚರಿಕೆ ಕೊಟ್ಟರು. ಅನೇಕ ವಾಹನಗಳನ್ನು ಜಪ್ತಿ ಮಾಡುವ ಮೂಲಕ ನಿಯಮ ಉಲ್ಲಂಘಿಸುವವರಿಗೆ ಕಠಿಣ ಕ್ರಮದ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು.

‘ಎಲ್ಲಿಂದ ಬಂದ್ರಿ? ಎಲ್ಲಿಗೆ ಹೋಗ್ತಾ ಇದ್ದೀರಿ?

ಬೆಂಗಳೂರಿನ ಟೌನ್ ಹಾಲ್ ಬಳಿ ಅವರಿಗೆ ವಿಚಿತ್ರ ಸನ್ನಿವೇಶ ಎದುರಾಯಿತು. ಭಾರೀ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ಭಾಸ್ಕರ್ ರಾವ್, ವಾಹನಗಳನ್ನು ತಡೆದು ನಿಲ್ಲಿಸಿ, ‘ಎಲ್ಲಿಂದ ಬಂದ್ರಿ? ಎಲ್ಲಿಗೆ ಹೋಗ್ತಾ ಇದ್ದೀರಿ? ಎಂದು ಪ್ರಶ್ನಿಸಿದರು. ಹಲವಾರು ಮಂದಿ ಪೊಲೀಸ್ ಪಾಸ್’ಗಳನ್ನೂ ಬಳಸಿ ಅನಗತ್ಯವಾಗಿ ಸುತ್ತಾಡುತ್ತಿರುವುದು ಗೊತ್ತಾಯಿತು, ಪಾಸ್ ಇಟ್ಟುಕೊಂಡು ನೆಂಟರ ಮನೆಗೆ ಹೋಗುತ್ತಿದ್ದವರೂ ಹಲವರು, ದೇವಸ್ಥಾನಕ್ಕೆ ಹೋಗುತ್ತಿದ್ದವರೂ ಅನೇಕರು. ಹೀಗೆ ಅಗತ್ಯ ವಿಚಾರಕ್ಕೆ ಪಡೆದ ಪಾಸುಗಳು ಈ ರೀತಿ ಅಪಬಳಕೆ ಮಾಡುತ್ತಿದ್ದವರ ವಾಹನಗಳೆಲ್ಲವೂ ಜಪ್ತಿಯಾದವು.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಪೊಲೀಸ ಆಯುಕ್ತರು, ಲಾಕ್ ಡೌನ್ ವೇಳೆ ಅಗತ್ಯ ಕಾರ್ಯಗಳಿಗೆ ಅಡ್ಡಿಯಾಗಬಾರದೆಂಬ ದೃಷ್ಟಿಯಿಂದ ನೀಡಲಾಗಿರುವ ಪಾಸುಗಳು ದುರುಪಯೋಗವಾಗುತ್ತಿವೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕಮೀಷನರ್ ಅವರ ಈ ನಡೆ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನೂ ಎಚ್ಚರಿಸುವಂತಿತ್ತು.

 

Related posts